ದಾವಣಗೆರೆ ಪಾಲಿಕೆ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ: ಅಧಿಕಾರಿಗಳ ವಿರುದ್ಧ ಜನಾಕ್ರೋಶ
* ಈಗಲಾದ್ರೂ ಎಚ್ಚೆತ್ತುಕೊಳ್ಳುತ್ತಾ ದಾವಣಗೆರೆ ಮಹಾನಗರ ಪಾಲಿಕೆ...?
* ಹನ್ನೆರಡು ಗಂಟೆಗಳ ಬಳಿಕ ಮೃತದೇಹ
* ಆಯತಪ್ಪಿ ಗುಂಡಿಗೆಗೆ ಬಿದ್ದು ಮೃತಪಟ್ಟ ವ್ಯಕ್ತಿ
ದಾವಣಗೆರೆ(ಆ.26): ನಗರದ ಮಹಾನಗರ ಪಾಲಿಕೆಯ ಎದುರುಗಡೆ ಇರುವ ಅಂಡರ್ ಪಾಸ್‌ನಲ್ಲಿನ ಗುಂಡಿಗೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು(ಗುರುವಾರ) ನಡೆದಿದೆ. ತಾಲೂಕಿನ ಆವರಗೆರೆ ನಿವಾಸಿ ನಾಗರಾಜ್ ಮೃತಪಟ್ಟ ದುರ್ದೈವಿ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ನಡೆದುಕೊಂಡು ಬರುವಾಗ ಆಯತಪ್ಪಿ ಗುಂಡಿಗೆಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಎರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಭಾರೀ ಮಳೆ ಸುರಿದಿತ್ತು. ಆಗ ಅಂಡರ್ ಪಾಸ್ ಕೆಳಗಿನ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಇನ್ನು ಕತ್ತಲಾಗಿದ್ದ ಕಾರಣ ರಸ್ತೆಯೂ ಸರಿಯಾಗಿ ಕಂಡಿಲ್ಲ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ಬ್ರಿಡ್ಜ್‌ನ ಕಬ್ಬಿಣದ ಸರಳು ಹಿಡಿದುಕೊಂಡು ಬರುವಾಗ ಆಯತಪ್ಪಿ ಗುಂಡಿಯೊಳಗೆ ನಾಗರಾಜ್ ಬಿದ್ದಿದ್ದಾರೆ. ಆದ್ರೆ ಈ ಬಗ್ಗೆ ಮಾಹಿತಿ ಇರಲಿಲ್ಲ.
ಒಬ್ಬರಿಗೆ ಮಾತ್ರ ಪಾಸಿಟಿವ್ : ಕೋವಿಡ್ ಮುಕ್ತವಾಗುವತ್ತ ದಾವಣಗೆರೆ
ಆದ್ರೆ ನಾಗರಾಜ್ ಎಲ್ಲಿಯೂ ಕಾಣದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿರಲಿಲ್ಲ. ಎರಡು ದಿನಗಳ ಹಿಂದೆ ಈ ಮಾರ್ಗದಲ್ಲಿ ಹೋಗಿರುವ ಮಾಹಿತಿ ಸಿಗುತ್ತಿದ್ದಂತೆ ಬಂದು ನೋಡಿದಾಗ ಗುಂಡಿ ಇದ್ದದ್ದು ಗೊತ್ತಾಗಿದೆ. ಈ ಗುಂಡಿಯಲ್ಲಿ ಬಿದ್ದಿರಬಹುದು ಎಂದು ಹುಡುಕಾಟ ನಡೆಸಲಾಗಿದೆ. ಬಳಿಕ ಅಂದರೆ ಹನ್ನೆರಡು ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಕ್ರೋಶ...!
ಇನ್ನು ಮಹಾನಗರ ಪಾಲಿಕೆಯ ವತಿಯಿಂದ ನಿನ್ನೆಯಷ್ಟೇ ಕರೆಂಟ್ ಆಟೋಮೆಟಿಕ್ ಮೆಷಿನ್ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದ್ರೆ ಮರು ದಿನವೇ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ಈ ಚರಂಡಿ ಮೇಲೆ ಇದ್ದ ಶೀಟ್ ಮುಚ್ಚುವಂತೆ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂಥ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಕೂಡಲೇ ಚರಂಡಿ ಮೇಲೆ ಶೀಟ್ ಮುಚ್ಚುವಂತೆ ಜನರು ಆಗ್ರಹಿಸಿದ್ದಾರೆ.