ಹಸು ಹುಡುಕಿಕೊಂಡು ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ: ಕಾಫಿನಾಡಲ್ಲಿ ದುರಂತ
ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು 52 ವರ್ಷದ ಆನಂದ್ ದೇವಾಡಿಗ ಎಂದು ಗುರುತಿಸಲಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು 52 ವರ್ಷದ ಆನಂದ್ ದೇವಾಡಿಗ ಎಂದು ಗುರುತಿಸಲಾಗಿದೆ. ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸುವನ್ನು ಹುಡುಕಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹಲವು ವರ್ಷಗಳಿಂದ ಮಲೆನಾಡಿನಲ್ಲಿ ಆನೆ ದಾಳಿ ವಿಪರೀತವಾಗಿದ್ದು ಕಳೆದ ವರ್ಷ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಮರುದಿನದಂದು ಕುಂದೂರಿನ ಬಿಸಿ ರೋಡ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಈ ಬಾರಿಯೂ ಸ್ವಾತಂತ್ರ ದಿನಾಚರಣೆ ದಿನದಂದೇ ಈ ದುರಂತ ನಡೆದಿದೆ.
ಕೆಂಜಿಗೆ ಗ್ರಾಮದ ಬಳಿ ಇರುವ ಮಾವಿನ ಮರದ ಹತ್ತಿರ ನಿನ್ನೆ ಸಂಜೆ ಆನೆಯೊಂದು ದಾಳಿ ಮಾಡಿದ್ದು ಆನಂದ್ ದೇವಾಡಿಗ ಎನ್ನುವವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಇಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದಾಳಿ ಮಾಡಿದ ಕಾಡಾನೆ ಸುಮಾರು ಅರ್ಧ ಕಿ.ಮೀ ಗಿಂತಲೂ ಹೆಚ್ಚು ದೂರ ಮೃತದೇಹವನ್ನು ಎಳೆದೊಯ್ದಿದೆ. ಕಾಡಿನ ಒಳಗೆ ಮೃತ ಆನಂದ್ ಅವರ ದೇಹದ ಅಂಗಾಗಗಳು ಕಾಡಿನ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬಿದ್ದಿವೆ. ಮೃತದೇಹ ಇರುವ ಜಾಗಕ್ಕೂ ಚಪ್ಪಲಿ ಇರುವ ಜಾಗಕ್ಕೂ ಸುಮಾರು ಅರ್ಧ ಕಿ.ಮೀ ದೂರವಿದೆ. ಅಷ್ಟೆ ಅಲ್ಲದೆ ತಲೆ ಮೆದುಳು, ಮೂಳೆಯೂ ಒಂದೊಂದು ಜಾಗದಲ್ಲಿ ಬಿದ್ದಿದೆ. ಮೃತದೇಹವನ್ನ ಕಾಡಿನಲ್ಲಿ ಎಳೆದು ತಂದಿರುವುದರಿಂದ ಕಾಡಿನ ಮರಗಿಡಗಳಿಗೆ ಸಿಲುಕಿ ಮೃತದೇಹದ ಮೇಲೆ ಯಾವುದೇ ಬಟ್ಟೆ ಇಲ್ಲದಂತಾಗಿದೆ. ಛಿದ್ರವಾಗಿರುವ ಮೃತದೇಹವನ್ನ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆನೆ ದಾಳಿ: ಅರಣ್ಯ ರಕ್ಷಕ ಸೇರಿ ಇಬ್ಬರ ಸಾವು
ಘಟನೆ ನಿನ್ನೆ ಸಂಜೆಯೇ ನಡೆದರೂ ಬೆಳಗ್ಗೆವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಮನೆಯವರು ಆನಂದ್ ಎಲ್ಲೋ ಹೋಗಿದ್ದಾರೆ. ಬರುತ್ತಾರೆ ಎಂದು ಸುಮ್ಮನಾಗಿದ್ದಾರೆ. ಆದರೆ, ಬೆಳಗ್ಗೆ ಎಲ್ಲೂ ಇಲ್ಲದಾಗ ಸ್ಥಳೀಯರು ಎರಡು ಗುಂಪುಗಳಾಗಿ ಮನೆ ಹಿಂದಿನ ಕಾಡಿನಲ್ಲಿ ಹುಡುಕಾಡಿದ್ದಾರೆ. ಆಗ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ ಸ್ಥಳೀಯರು ಸ್ಥಳಕ್ಕೆ ಬರುವವರೆಗೂ ಆನೆ, ದೇವಾಡಿಗ ಅವರ ಮೃತದೇಹವಿದ್ದ ಸ್ಥಳದಲ್ಲೇ ಇತ್ತಂತೆ. ಆದರೆ ಸ್ಥಳೀಯರು ಬಂದ ಬಳಿಕ ಆನೆ ಅಲ್ಲಿಂದ ಹೋಗಿದೆ.
ಸಫಾರಿ ವಾಹನ ಅಟ್ಟಾಡಿಸಿದ ಆನೆಗಳು : ವಿಡಿಯೋ ವೈರಲ್
ಅರಣ್ಯ ಇಲಾಖೆ ವಿರುದ್ದ ಆಕ್ರೋಶ
ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಕಳೆದೊಂದು ವಾರದಿಂದ 13 ಕಾಡಾನೆಗಳ ಹಿಂಡು ತಾಲೂಕಿನಾದ್ಯಂತ ಅಲ್ಲಲ್ಲೇ ದಾಂಧಲೆ ನಡೆಸುತ್ತಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕೂಡ ಪಟಾಕಿ ಸಿಡಿಸುವುದು ಬಿಟ್ಟು ಅಧಿಕಾರಿಗಳು ಏನೂ ಮಾಡುವುದಿಲ್ಲ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.