ಪುತ್ತೂರು(ಜೂ.21): ತೆಂಗಿನ ಕಾಯಿ ಕೀಳುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ತೆಂಗಿನ ಕಾಯಿ ಮೈಮೇಲೆ ಬಿದ್ದು ತೀವ್ರ ಗಾಯಗೊಂಡ ಕೂಲಿ ಕಾರ್ಮಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಘಟನೆ ಶುಕ್ರವಾರ ತಡರಾತ್ರಿತಾಲೂಕಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ದಡಿಕೇತಾರ ಎಂಬಲ್ಲಿನ ನಿವಾಸಿ ದಿ. ಕೊರಮ ಎಂಬವರ ಪುತ್ರ ರಮೇಶ್‌(38) ಮೃತರು.

ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿ ಉಮಾನಾಥ ಎಂಬವರ ತೋಟದಲ್ಲಿ ತೆಂಗಿನ ಕಾಯಿ ಕೀಳುತ್ತಿರುವಾಗ ಈ ಘಟನೆ ಸಂಭವಿಸಿದೆ. ಇನ್ನೋರ್ವ ಕಾರ್ಮಿಕ ಕಿರಣ್‌ ಎಂಬವರು ತೆಂಗಿನ ಮರ ಹತ್ತಿ ಅಲ್ಲಿಂದ ಹಗ್ಗದ ಮೂಲಕ ಇಳಿಸಿದ ಎಳನೀರು ಗೊನೆಯನ್ನು ರಮೇಶ್‌ ಅವರು ಕೆಳ ಭಾಗದಲ್ಲಿ ಬಿಚ್ಚುತ್ತಿದ್ದ ವೇಳೆಯಲ್ಲಿ ರಮೇಶ್‌ ಅವರ ಬೆನ್ನಿಗೆ ತೆಂಗಿನ ಮರದಿಂದ ಅಕಸ್ಮಿಕವಾಗಿ ತೆಂಗಿನ ಕಾಯಿ ಬಿದ್ದಿತ್ತು.

ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!

ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅವರು ತಾಯಿ, ಪತ್ನಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.