ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!
ಕೊರೋನಾ ಮಧ್ಯೆ ‘ಸಪ್ತಪದಿ’ಗೆ ಹೊಸ ಮುಹೂರ್ತ!| ಜುಲೈ, ಆಗಸ್ಟ್‌ನಲ್ಲಿ 7 ಶುಭ ಮುಹೂರ್ತ ಫಿಕ್ಸ್| ಸರ್ಕಾರದಿಂದಲೇ ಆಯೋಜನೆ ಆಗುವ ಸಾಮೂಹಿಕ ಮದುವೆ
ಬೆಂಗಳೂರು(ಜೂ.21): ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತು ಸೋಂಕಿತರ ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವೆ ಮದುವೆ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಬಾರದೆಂದು ನಿರ್ಬಂಧಿಸಿರುವ ಸರ್ಕಾರವೇ ಸಾವಿರಾರು ವಧು-ವರ ಜೋಡಿಗಳ ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಹೊಸ ಮುಹೂರ್ತ ನಿಗದಿ ಮಾಡಿದೆ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 110 ‘ಎ’ ದರ್ಜೆಯ ದೇವಾಲಯಗಳಲ್ಲಿ ನಡೆಸಲುದ್ದೇಶಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿತ್ತು. ಸೋಂಕು ನಿಯಂತ್ರಣಕ್ಕೆ ಬರದೆ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇದರ ನಡುವೆಯೇ ಸಾವಿರಾರು ಜೋಡಿಗಳ ‘ಸಪ್ತಪದಿ’ಗೆ ಜುಲೈ ಮತ್ತು ಆಗಸ್ಟ್‌ನಲ್ಲಿ ಸರ್ಕಾರ ಏಳು ದಿನಗಳ ಹೊಸ ಮುಹೂರ್ತ ನಿಗದಿ ಮಾಡಿದೆ.
ಮುಜರಾಯಿ ಇಲಾಖೆ ನಡೆಸುವ ಈ ಕಾರ್ಯಕ್ರಮಕ್ಕೆ ಜುಲೈ 23, 26, 29, ಆಗಸ್ಟ್ 6, 10, 14, 17 ರಂದು ಇರುವ ಬೇರೆ ಬೇರೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಸಲು ಸಮಯ ನಿಗದಿ ಮಾಡಿದೆ. ಕಳೆದ ಮಾಚ್‌ರ್‍ನಲ್ಲಿ ನೋಂದಾಯಿಸಿದ್ದ ವಧು-ವರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಸಮ್ಮತಿ ಪತ್ರ ಪಡೆದು ನಿಗದಿತ ದಿನಾಂಕದಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಸರ್ಕಾರದಿಂದ 55 ಸಾವಿರ ಪ್ರೋತ್ಸಾಹಧನ:
ಸುಮಾರು 1500 ಕ್ಕೂ ಹೆಚ್ಚು ಜೋಡಿಗಳು ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿವೆ. ಕಾರ್ಯಕ್ರಮಕ್ಕೆ ಸುಮಾರು 15 ಕೋಟಿ ರು.ಗೂ ಹೆಚ್ಚು ವೆಚ್ಚವಾಗಬಹುದು ಎಂದು ಇಲಾಖೆ ಅಂಜಾಜಿಸಿದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ರು. ಪ್ರೋತ್ಸಾಹಧನ, ವಧುವಿಗೆ ಹುವಿನ ಹಾರ, ಧಾರೆ ಸೀರೆ, ರವಿಕೆಗಾಗಿ 10 ಸಾವಿರ ರು. ಹಾಗೂ ವಧುವಿಗೆ ಚಿನ್ನದ ತಾಳಿ, ಚಿನ್ನದ ಗುಂಡು (ಅಂದಾಜು ಎಂಟು ಗ್ರಾಂ.) ಖರೀದಿಗೆ 40 ಸಾವಿರ ರು. ಪ್ರೋತ್ಸಾಹನವನ್ನು ಸರ್ಕಾರದಿಂದ ನೀಡಲಾಗುತ್ತದೆ. ವಿವಾಹವಾದ ದಿನವೇ ಈ ಮೊತ್ತವನ್ನು ವಧು-ವರರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಯು ಪರೀಕ್ಷೆಯಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಈಗ ಒಬ್ಬ ವಿದ್ಯಾರ್ಥಿನಿಗೆ ಕೊರೋನಾ ದೃಢಪಟ್ಟು ಎಷ್ಟೆಲ್ಲಾ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ ನೋಡಿ. ಹಾಗಾಗಿ ಕೊರೋನಾ ಬಿಗಡಾಯಿಸಿರುವ ವೇಳೆ ಸಾಮೂಹಿಕ ವಿವಾಹ ನಡೆಸುವ ಮುಂಚೆ ಸರ್ಕಾರ ಯೋಚಿಸಬೇಕು. ಪರಿಸ್ಥಿತಿ ಮತ್ತಷ್ಟುಬಿಗಡಾಯಿಸಿದರೆ ಮತ್ತೆ ಮುಂದೂಡಬೇಕಾಗಬಹುದು, ಸಾವಿರಾರು ಜನ ಸೇರುವ ಸಾಧ್ಯತೆ ಇರುತ್ತದೆ. ಅವರನ್ನೆಲ್ಲಾ ನಿಭಾಯಿಸಲು ಸಾಧ್ಯವೇ ಪರಿಶೀಲಿಸಬೇಕು.
- ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ
ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿದವರು ನಿತ್ಯವೂ ದೂರವಾಣಿ ಕರೆ ಮಾಡಿ ಕಾರ್ಯಕ್ರಮ ನಡೆಸುತ್ತೀರೋ ಇಲ್ಲವೋ ಎಂದು ಕೇಳುತ್ತಿದ್ದಾರೆ. ಬಡವರಿಗಾಗಿ ಸರ್ಕಾರದಿಂದ ಆಯೋಜನೆಯಾದ ಒಂದು ಕಾರ್ಯಕ್ರಮ ನಿಲ್ಲಬಾರದು ಎಂಬುದು ನಮ್ಮ ಉದ್ದೇಶ. ಹೊಸ ದಿನಾಂಕಕ್ಕೆ ಇನ್ನೂ ತಿಂಗಳಿಗೂ ಹೆಚ್ಚು ಕಾಲಾವಕಾಶವಿದೆ. ಅಂದಿನ ಪರಿಸ್ಥಿತಿ ನೋಡಿಕೊಂಡು ಜನಸಂದಣಿ ಉಂಟಾಗದಂತೆ, ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
- ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ