ಬೆಂಗಳೂರು [ಸೆ.23]: ತಾನು ದುಡಿದ ಹಣವನ್ನು ಐಷಾರಾಮಿ ಜೀವನಕ್ಕಾಗಿ ದುಂದು ವೆಚ್ಚ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ ಪತ್ನಿಯ ಕೈ ಕೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂಜಯ್‌ನಗರದ ನ್ಯೂ ಬಿಇಎಲ್‌ ರಸ್ತೆಯ ಜಲದರ್ಶಿನಿ ಬಡಾವಣೆಯ ನಿವಾಸಿ ಆರ್‌.ರೇವತಿ (29) ಎಂಬುವವರು ಹಲ್ಲೆಗೊಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಪತಿ ದಿಲೀಪ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರೇವತಿ ಮತ್ತು ದಿಲೀಪ್‌ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ದಿಲೀಪ್‌ ಐಷಾರಾಮಿ ಜೀವನಕ್ಕೆ ಬಿದ್ದಿದ್ದ. ಇದಕ್ಕಾಗಿ ಪತ್ನಿಯ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ತನ್ನ ಬಳಿ ಹಣ ಇಲ್ಲದಿದ್ದರೂ ಪತ್ನಿ ಕ್ರೆಡಿಟ್‌ ಕಾರ್ಡ್‌ನಲ್ಲಿ ಬಳಸಿ ಮೋಜು ಮಾಡುತ್ತಿದ್ದ. ನಂತರ ಪತ್ನಿಗೆ ಸಾಲ ತೀರಿಸುವಂತೆ ಸೂಚಿಸುತ್ತಿದ್ದ. ಪದೇ-ಪದೇ ಇದೇ ರೀತಿ ಮಾಡುತ್ತಿದ್ದ ಪತಿಯ ವರ್ತನೆಗೆ ಬಗ್ಗೆ ರೇವತಿ ಪ್ರಶ್ನೆ ಮಾಡಿದ್ದರು. ಈ ವಿಚಾರಕ್ಕೆ ಜಗಳ ಮಾಡಿದ ಆರೋಪಿ, ಬಳಿಕ ಚಾಕುವಿನಿಂದ ಪತ್ನಿಯ ಕೈ ಕೊಯ್ದು, ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಎಂದು ರೇವತಿ ದೂರು ನೀಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.