ಮೈಸೂರು (ಮೇ.14):  ಮದುವೆಯಾದ ಒಂದೇ ತಿಂಗಳಿನಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ವಾರದ ಅಂತರದಲ್ಲಿ ಪತಿ ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೈಲಾಸಪುರಂನಲ್ಲಿರುವ ತಾತ್ಕಾಲಿಕ ಜೈಲಿನಲ್ಲಿ ಗುರುವಾರ ನಡೆದಿದೆ.

ಮೈಸೂರಿನ ಶ್ರೀರಾಂಪುರ 2ನೇ ಹಂತ ಎಸ್‌ಬಿಎಂ ಕಾಲೋನಿ ನಿವಾಸಿ ಚೆಲುವನಾಯಕ ಎಂಬವರ ಪುತ್ರ, ಸಾಫ್ಟ್‌ವೇರ್‌ ಎಂಜಿನಿಯರ್‌ ಎಂ.ಸಿ. ಪ್ರದೀಪ್‌(33) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಎಸ್‌.ಎನ್‌. ಆಶಾರಾಣಿ(28) ವರದಕ್ಷಿಣೆ ಕಿರುಕುಳದಿಂದ ಕಳೆದ ಮೇ 7 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುಬ್ರಮಣಿ ಪತ್ನಿ ಸಾವಿಗೆ ಟ್ವಿಸ್ಟ್, ಕೊರೋನಾದಿಂದ ಮೃತಪಟ್ಟಿಲ್ಲ! ..

ಒಂದೇ ತಿಂಗಳಲ್ಲಿ ಇಬ್ಬರು ಸಾವು:

ನಂಜನಗೂಡು ತಾಲೂಕು ನಗರ್ಲೆ ಬಳಿಯ ಸರಗೂರು ನಿವಾಸಿ ನಾಗರಾಜ್‌ ನಾಯಕ್‌ ಪುತ್ರಿ ಆಶಾರಾಣಿ ಮತ್ತು ಎಂ.ಸಿ. ಪ್ರದೀಪ್‌ ಕಳೆದ ಏ.4 ರಂದು ಮೈಸೂರಿನ ಕುವೆಂಪುನಗರದ ಬಂದತಮ್ಮ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದರು. ಈ ವೇಳೆ 130 ಗ್ರಾಂ. ಚಿನ್ನಾಭರಣ, . 5 ಲಕ್ಷ ಹಣವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದರು.

ಅನ್ಯ ಜಾತಿ ಪ್ರೇಮ : ಕುಟುಂಬದವರಿಂದಲೇ ಹತ್ಯೆಯಾದಳಾ ಯುವತಿ..? ..

ಆದರೆ, ಮದುವೆಯ ಬಳಿಕ ಪತಿ ಕುಟುಂಬದವರು ವರದಕ್ಷಣೆ ತರುವಂತೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಆಶಾ ತನ್ನ ಪೋಷಕರಲ್ಲಿ ಹೇಳಿಕೊಂಡು ತವರು ಮನೆ ಸೇರಿದ್ದರು. ಬಳಿಕ ರಾಜಿ ಪಂಚಾಯಿತಿ ಮಾಡಿಸಿ ಗಂಡನ ಮನೆ ಸೇರಿಸಲಾಗಿತ್ತು. ಹೀಗಿರುವಾಗ ಮೇ 7ರ ರಾತ್ರಿ ಆಶಾರಾಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಪತಿ ಪ್ರದೀಪ, ಅತ್ತೆ ಸರೋಜಾ ಮತ್ತು ಮಾವ ಚೆಲುವನಾಯಕ ಕಾರಣ ಎಂದು ಆಶಾರಾಣಿ ತಂದೆ ನಾಗರಾಜ್‌ ನಾಯಕ್‌ ದೂರು ನೀಡಿದ್ದು, ಈ ಸಂಬಂಧ ಕುವೆಂಪುನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರದೀಪ್‌ ಮತ್ತು ಸರೋಜಾ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ವಿಚಾರಧೀನ ಕೈದಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಿದ್ದು, ವರದಿ ಬಂದಿರಲಿಲ್ಲ. ಹೀಗಾಗಿ, ಕೈಲಾಸಪುರಂನಲ್ಲಿರುವ ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು. ಗುರುವಾರ ಬೆಳಗಿನ ಜಾವ ತನ್ನ ಸೆಲ್‌ನಲ್ಲಿ ಬೆಡ್‌ಶೀಟ್‌ನಿಂದ ಪ್ರದೀಪ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.