ಉಡುಪಿ(ಜು.08): ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಕೊರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಮೃತರು ಕಾರ್ಕಳ ತಾಲೂಕಿನ ಪ್ರಭಾಕರ ಪುತ್ರನ್‌ (63). ದುರಾದೃಷ್ಟಎಂದರೆ ಅವರಿಗೀಗ ನೆಗೆಟಿವ್‌ ವರದಿ ಬಂದಿದೆ. ಕೊರೋನಾ ಲಕ್ಷಣಗಳಿದ್ದುದರಿಂದ ಅವರನ್ನು ಜುಲೈ 5ರಂದು ಜಿಲ್ಲಾಸ್ಪತ್ರೆಯ ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿತ್ತು.

ಪಾಸ್‌ ಹಿಡಿದು ಬಂದ 100ಕ್ಕೂ ಅಧಿಕ ಜನರ ಗಡಿಯಲ್ಲಿ ತಡೆದ ಕೇರಳ ಪೊಲೀಸ್

ಅವರ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವುದಕ್ಕೆ ಮೊದಲೇ ಜು.6ರಂದು ಮುಂಜಾನೆ ವಾರ್ಡ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಅವರ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಕೊರೋನಾ ಇಲ್ಲ ಎಂಬುದು ದೃಢಪಟ್ಟಿತ್ತು. ಜೀವಂತ ಇರುತಿದ್ದರೆ ಆಸ್ಪತ್ರೆಯಿಂದ ಬಿಡುಗಡೆಯೂ ಆಗುತಿದ್ದರು.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]