ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತು, ಕೆಳಗೆ ಬಂದರೆ ಕೊಲೆಯಾಗುವ ಭಯ ವ್ಯಕ್ತಪಡಿಸಿದ್ದಾನೆ. ಅಗ್ನಿಶಾಮಕ ದಳದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಶಿವಮೊಗ್ಗ: ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ವಿಚಿತ್ರ ಘಟನೆ ಕೆಲ ಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು. ಶಿವಮೊಗ್ಗದ ಸೂಳೆಬೈಲು ಬಡಾವಣೆಯ ಇಬ್ರಾಹಿಂ ಎಂಬಾತ, ಮಧ್ಯರಾತ್ರಿ ಅಂದರೆ ಸುಮಾರು ಬೆಳ್ಳಂಬೆಳಗ್ಗೆ ಎರಡು ಗಂಟೆ ಸಮಯದಲ್ಲಿ ಠಾಣೆಯ ಆವರಣದಲ್ಲಿ ಇದ್ದ ಮರವನ್ನು ಹತ್ತಿ ಕುಳಿತ. ಆತನು ಕೆಳಗೆ ಇಳಿಯಲು ನಿರಾಕರಿಸುತ್ತಿದ್ದಾನೆಂದು ತಿಳಿದು, ಪೊಲೀಸರು ಭಾರಿ ಅಚ್ಚರಿಗೊಳಗಾದರು.
ಕಾರಣ ಆತ “ಕೆಳಗೆ ಬಂದರೆ ಯಾರೋ ನನ್ನನ್ನು ಕೊಲೆ ಮಾಡುತ್ತಾರೆ,” ಎಂದು ಬೊಬ್ಬೆ ಹೊಡೆದಿದ್ದು, ನಾನು ಕೆಳಗೆ ಇಳಿಯಲಾರೆ ಎಂದು ಸತಾಯಿಸಿದ್ದಾನೆ. ಯಾರೋ ನನ್ನನ್ನು ಓಡಿಸಿಕೊಂಡು ಬಂದ ಕಾರಣ ಇಲ್ಲಿ ಅಡಗಿ ಕುಳಿತ್ತಿದ್ದೇನೆ, ಇಳಿದರೆ ಕೊಂದುಬಿಡುತ್ತಾರೆ ಎಂದು ಹಠ ಹಿಡಿದಿದ್ದಾನೆ. ಪೊಲೀಸರು ಅವನನ್ನು ಕೆಳಗೆ ಇಳಿಸಲು ಹಲವು ಪ್ರಯತ್ನಗಳನ್ನು ನಡೆಸಿದರು. ಆದರೆ ಎಲ್ಲ ಪ್ರಯತ್ನಗಳು ವಿಫಲವಾದ ನಂತರ, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಲಾಯಿತು. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಮರಕ್ಕೆ ಹಗ್ಗ ಹಾಕಿ ಇಬ್ರಾಹಿಂನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಮಾನಸಿಕ ಆರೋಗ್ಯ ಸಮಸ್ಯೆ ಶಂಕೆ
ಇಬ್ರಾಹಿಂ ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಇಬ್ರಾಹಿಂ, “ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ, ಅದಕ್ಕಾಗಿ ನಾನು ಮರ ಹತ್ತಿದೆ,” ಎಂದು ಹೇಳಿದ್ದಾನೆ. ಪೊಲೀಸರು ಅವನನ್ನು ಸಮಾಧಾನಗೊಳಿಸಿ, ಮನೆಯವರಿಗೆ ಒಪ್ಪಿಸಿದರು. ಈ ಮೂಲಕ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಿ, ಸುಖಾಂತ್ಯಕ್ಕೆ ತಂದಿದ್ದಾರೆ. ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಈ ಘಟನೆ ಕೆಲ ಹೊತ್ತು ಆತಂಕ ಉಂಟುಮಾಡಿದ್ದರೂ, ಅಧಿಕಾರಿಗಳು ಸತತ ಪ್ರಯತ್ನಗಳಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಯಶಸ್ವಿಯಾದರು.
