ಉಪ್ಪಿನಂಗಡಿ (ನ.13): ಫೇಸ್‌ಬುಕ್‌ನಲ್ಲಿ ಯುವತಿಯ ಸ್ನೇಹಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ ಅಲ್ಲಿ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ಮನೆ ನಿವಾಸಿ ಅಬ್ದುಲ್‌ ರಜಾಕ್‌ (25) ವಂಚನೆಯ ಆರೋಪಿ. ಈತ ತನ್ನ ಹೆಸರನ್ನು ಖುಷಿಕ್‌ ಯಾನೆ ಸಂಜು ಎಂದು ಪರಿಚಯಿಸಿ , ತಾನು ಹಿಂದೂ ಧರ್ಮಾನುಯಾಯಿ ಎಂದೂ, ತನಗೆ ಹೆತ್ತವರಿಲ್ಲ. ತಾನು ಉತ್ತಮ ಸ್ನೇಹಿತರನ್ನು ಹೊಂದಲು ಬಯಸುವವನೆಂದು ತಿಳಿಸಿ ಫೇಸ್ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಕೌಕ್ರಾಡಿ ಗ್ರಾಮದ 24 ರ ಹರೆಯದ ಯುವತಿಯ ಗೆಳೆತನ ಮಾಡಿದ್ದ. 

'ಗೆಳೆಯನೊಂದಿಗ ಖಾಸಗಿ ಕ್ಷಣಗಳ ಪೋಟೋ ಇದೆ' ಕೋಟಿ ಹಣ ಪೀಕಿದ ಸುಂದರಿ!

ವಾಟ್ಸಪ್‌ ಸಂಖ್ಯೆಯನ್ನೂ ನೀಡಿ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ನ.1ರಂದು ಯುವತಿಯು ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದರು. ಈವೇಳೆ ಹಣೆ ತುಂಬಾ ದೇವರ ಪ್ರಸಾದವನ್ನು ನಾಮ ಬಳಿದು ಯುವತಿಯೊಂದಿಗೆ ಪೋಟೋ ತೆಗೆಸಿಕೊಂಡಿದ್ದ. ಬಳಿಕ ಆ ಪೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಈ ಬಗ್ಗೆ ಪರಿಶೀಲಿಸಿದಾಗ ಆರೋಪಿಯು ಹಿಂದೂ ಆಗಿರದೆ ಮುಸ್ಲಿಂ ಸಮುದಾಯದ ವ್ಯಕ್ತಿ ಎಂದು ತಿಳಿದು ಬಂದಿದ್ದು, ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವ ಬಗ್ಗೆ ಹಾಗೂ ಸುಳ್ಳು ಹೇಳಿ ವಂಚಿಸಿದ ಕಾರಣಕ್ಕೆ ಉಪ್ಪಿನಂಗಡಿ ಪೊಲಿಸರಿಗೆ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.