ವಿಜಯಪುರ (ಅ.15):  ಪಟ್ಟಣ ಸಮೀಪದ ಎ. ರಂಗನಾಥಪುರ ಬಳಿ ಪಾಳುಬಾವಿಗೆ ಮಹಿಳೆಯನ್ನು ತಳ್ಳಿ ಹತ್ಯೆ ಮಾಡಲು ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಮಹಿಳೆ ನೀಡಿದ ಮಾಹಿತಿಯನ್ನಾಧರಿಸಿ ಆರೋಪಿ ಎ.ರಂಗನಾಥಪುರ ನಿವಾಸಿ ಆದರ್ಶ ಎಂಬುವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಾಲೂರು ಬಳಿಯ ಅಲಸಹಳ್ಳಿ ಮೂಲದ, ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿ ಗ್ರಾಮಕ್ಕೆ ಮದುವೆಯಾಗಿದ್ದ ಅಮೃತಾಳಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಮೂಲಕ ಆದರ್ಶ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು ಎಂದು ತಿಳಿದು ಬಂದಿದೆ. ಅದೇ ಹಿನ್ನೆಲೆಯಲ್ಲಿ ಕಳೆದ ಶನಿವಾರದಂದು ಪ್ರಿಯಕರಣ ಮಾತಿಗೆ ಮರುಳಾಗಿ ಮನೆ ಬಿಟ್ಟು ಬಂದಿದ್ದ ಅಮೃತಾಳೊಂದಿಗೆ ಪ್ರಿಯಕರ ಆದರ್ಶ ಜಗಳ ಮಾಡಿಕೊಂಡಿದ್ದಾನೆ. ಇಬ್ಬರ ನಡುವಿನ ಮನಸ್ತಾಪದಿಂದಾಗಿ ಅಮೃತಾಳನ್ನು ಬಾವಿಗೆ ತಳ್ಳಿ ಆದರ್ಶ ಪರಾರಿಯಾಗಿದ್ದನು.

ಹರಪನಹಳ್ಳಿ: ಹಳ್ಳದ ಬಳಿ ಅಪರಿಚಿತ ಮಹಿಳೆ ಶವ ಪತ್ತೆ, ಕೊಲೆ ಶಂಕೆ ...

ನಂತರ ಸುಮಾರು 100 ಅಡಿ ಆಳದ ಪಾಳುಬಾವಿಯಲ್ಲಿ ಸುಮಾರು 4 ರಾತ್ರಿ, ನಾಲ್ಕು ಹಗಲು ಮಹಿಳೆಯು ಬಾವಿಯಲ್ಲಿ ಕೊರಗುತ್ತಾ, ಅನ್ನಾಹಾರವಿಲ್ಲದೇ ಕೀರಾಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಪೊಲೀಸ್‌ಠಾಣೆಗೆ ತಿಳಿಸಿದ ನಂತರ ಮಂಗಳವಾರ ಸಂಜೆಯಷ್ಟೇ ಮಹಿಳೆಯನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯ ಆರೋಗ್ಯ ಸುಧಾರಣೆ ಕಂಡಿದೆ ಎಂದು ಸಬ್‌ಇನ್‌ಸ್ಪೆಕ್ಟರ್‌ ಡಿ.ಮಂಜುನಾಥ್‌ ತಿಳಿಸಿದ್ದಾರೆ