ಬೆಂಗಳೂರು [ಸೆ.19]: ಕುಡಿದ ಮತ್ತಿನಲ್ಲಿ ಪೊಲೀಸರನ್ನು ನಿಂದಿಸಿ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಆಪ್‌ಲೋಡ್‌ ಮಾಡಿದ್ದ ಕಿಡಿಗೇಡಿಯೊಬ್ಬನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧುಗಿರಿ ತಾಲೂಕಿನ ರಾಕೇಶ್‌ ಬಂಧಿತನಾಗಿದ್ದು, ಮಲ್ಲೇಶ್ವರ ಸಮೀಪದ ಬಾರ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಮೆಜೆಸ್ಟಿಕ್‌ ಬಳಿ ತನ್ನನ್ನು ಪೊಲೀಸರೇ ರಾಬರಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಆತ, ಬಳಿಕ ವಿಡಿಯೋವನ್ನು ಮಾಡಿ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಕಾಡುಗೋಡಿಯಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ ರಾಕೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆ.14ರಂದು ಮೆಜೆಸ್ಟಿಕ್‌ ಸಮೀಪ ರಸ್ತೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಜತೆ ಸೇರಿಕೊಂಡು ರಾಕೇಶ್‌ ಅನುಚಿತವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಕೆಲವು ಸಾರ್ವಜನಿಕರು ಠಾಣೆಗೆ ಕರೆ ಮಾಡಿ ದೂರು ನೀಡಿದ್ದರು. ಅದರಂತೆ ಹೊಯ್ಸಳ ಸಿಬ್ಬಂದಿ, ರಾಕೇಶ್‌ನನ್ನು ಕರೆತಂದು ಮತ್ತೆ ಅಸಭ್ಯವಾಗಿ ನಡೆದುಕೊಳ್ಳದಂತೆ ತಾಕೀತು ಮಾಡಿ ಕಳುಹಿಸಿದ್ದರು. ಇದರಿಂದ ಕೋಪಗೊಂಡು ಆತ, ಮದ್ಯ ಸೇವಿಸಿ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಡಿಯೋವನ್ನು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.