ದೇವರ ವಿಗ್ರಹಕ್ಕೆ ಬಿಯರ್ ಸುರಿದು ಅಭಿಷೇಕ ಮಾಡಿದ ಉದ್ಯಮಿ
ದೇವರ ವಿಗ್ರಹಕ್ಕೆ ಅಭಿಷೇಕ ಮಾಡಲು ಲಿಕ್ಕರ್ ಬಳಸಿದ್ದ ವ್ಯಕ್ತಿಯೋರ್ವ ಇದೀಗ ಬಂಧಿತನಾಗಿದ್ದಾನೆ.
ರಾಮನಗರ [ಸೆ.30]: ಕುಡಿದ ಅಮಲಿನಲ್ಲಿ ದೇವರ ವಿಗ್ರಹಕ್ಕೆ ಬಿಯರ್‌ನಿಂದ ಅಭಿಷೇಕ ಮಾಡಿದ್ದಲ್ಲದೇ ಆಶ್ರಮದೊಳಗೆ ಬಾಟಲಿ ತೂರಿದ ಉದ್ಯಮಿಯೊಬ್ಬನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಧುಲೋಕ ಲಿಕ್ಕರ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ಲೋಕೇಶ್ ಬಂಧಿತ ಆರೋಪಿ.
ಸೆಪ್ಟೆಂಬರ್ 27ರ ಬೆಳಗಿನ ಜಾವ ಕಾರಿನಲ್ಲಿ ಯುವತಿಯ ಜೊತೆ ಬಂದಿದ್ದ ಉದ್ಯಮಿ ಲೋಕೇಶ್ ಬಿಡದಿಯ ನಿತ್ಯಾನಂದ ಆಶ್ರಮದ ಬಳಿ ಕುಡಿದು ಗಲಾಟೆ ಮಾಡಿದ್ದರು. ನಿತ್ಯಾನಂದ ಆಶ್ರಮದ ಬಳಿಯಿದ್ದ ದೇವರ ವಿಗ್ರಹಕ್ಕೆ ಬಿಯರ್‌ನಿಂದ ಅಭಿಷೇಕ ಮಾಡಿದ್ದಲ್ಲದೆ ಆಶ್ರಮದ ವ್ಯಕ್ತಿಯೊಬ್ಬನ ಮೇಲೆ ಬಾಟಲ್ ಎಸೆದು ಗಲಾಟೆ ಮಾಡಿದ್ದರು ಎನ್ನಲಾಗಿದೆ.
ಈ ಕುರಿತು ರಾಜವರ್ಧನ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಬಿಡದಿ ಪೊಲೀಸರು ಲೋಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.