ಬೆಂಗಳೂರು [ಜ.09]:  ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರವೇಶ ಅವಕಾಶ ಕಲ್ಪಿಸುವುದಾಗಿ ಮಹಾರಾಷ್ಟ್ರದ ಖಾಸಗಿ ಕಾಲೇಜೊಂದಕ್ಕೆ ಇಸ್ರೋ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪ್ರವೇಶ ಪತ್ರ ನೀಡಿದ್ದ ಟ್ರಾವೆಲ್‌ ಸಂಸ್ಥೆಯ ಏಜೆಂಟ್‌ವೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಜ್ಞಾನಭಾರತಿ ಲೇಔಟ್‌ ನಿವಾಸಿ ಹರ್ಷ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ಬೆಂಗಳೂರು ಪ್ರವಾಸಕ್ಕೆ ಮಹಾರಾಷ್ಟ್ರದ ಕಾಲೇಜಿನ ವಿದ್ಯಾರ್ಥಿಗಳು ಬಂದಿದ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಆರೋಪಿ ಹರ್ಷನನ್ನು ವಶಕ್ಕೆ ಪಡೆದ ಪೀಣ್ಯ ಠಾಣೆ ಪೊಲೀಸರು ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.

ತಲಾ ವಿದ್ಯಾರ್ಥಿಗೆ 2,800 ರು. ಪ್ಯಾಕೇಜ್‌:

ಜ್ಞಾನಭಾರತಿ ಲೇಔಟ್‌ನ ಹರ್ಷ, ನಾಗರಬಾವಿ 80 ಅಡಿ ರಸ್ತೆಯಲ್ಲಿ ‘ಶಿವ ಟೂ​ರ್‍ಸ್ ಆ್ಯಂಡ್‌ ಟ್ರಾವೆಲ್ಸ್‌’ ನಡೆಸುತ್ತಿದ್ದಾನೆ. ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಮಾತ್ರವಲ್ಲದೆ ವಿದೇಶಕ್ಕೂ ಸಹ ಪ್ಯಾಕೇಜ್‌ನಲ್ಲಿ ಆತ ಪ್ರವಾಸ ಆಯೋಜಿಸುತ್ತಾನೆ. ಅದೇ ರೀತಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಕಪೋಲಿ ಕಾರ್ಮಲ್‌ ಕಾನ್ವೆಂಟ್‌ ಶಾಲೆ ಪ್ರಾಚಾರ್ಯೆ ಸಿಸ್ಟರ್‌ ಲಿಯೋನಿ, ಬೆಂಗಳೂರು ಪ್ರವಾಸ ಸಂಬಂಧ ಹರ್ಷನನ್ನು ಸಂಪರ್ಕಿಸಿದ್ದರು. ಆಗ ತಲಾ ವಿದ್ಯಾರ್ಥಿಗೆ ವಸತಿ ಸೇರಿದಂತೆ 2800 ರು. ಪ್ಯಾಕೇಜ್‌ ಮಾತುಕತೆ ನಡೆಸಿದ್ದ.

ನಿರ್ಭಯಾ ರೇಪಿಸ್ಟ್‌ಗಳಿಗೆ ಗಲ್ಲು, ಮಗಳನ್ನೇ ರೇಪ್‌ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ!...

ಈ ವೇಳೆ ಪ್ರಾಂಶುಪಾಲರು, ತಮ್ಮ ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದಿದ್ದರು. ಮೊದಲು ಪ್ರಾಂಶುಪಾಲರ ಕೋರಿಕೆಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಆರೋಪಿ, ಕೊನೆಗೆ ಪ್ರವಾಸದ ಪ್ಯಾಕೇಜ್‌ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಒಪ್ಪಿದ್ದಾನೆ. ಅದರಂತೆ ಜ.4ರಂದು ಬೆಂಗಳೂರಿಗೆ ವಿದ್ಯಾರ್ಥಿಗಳು ಬಂದಿದ್ದಾರೆ. 

ನಗರ ಸುತ್ತಾಡಿದ ವಿದ್ಯಾರ್ಥಿಗಳಿಗೆ ಅಂತಿಮವಾಗಿ ಪೀಣ್ಯದ ಇಸ್ರೋ ಕಚೇರಿಗೆ ಬಳಿಗೆ ಆತ ಕರೆ ತಂದಿದ್ದಾನೆ. ಈ ವೇಳೆ ಪ್ರಾಂಶುಪಾಲರಿಗೆ ಇಸ್ರೋ ಪ್ರವೇಶ ಪಾಸ್‌ ಎಂದು ನಕಲಿ ಪಾಸ್‌ ಕೈಗೆ ಕೊಟ್ಟು ನಾಪತ್ತೆಯಾಗಿದ್ದಾನೆ. ಅದರಂತೆ ಅವರು ಇಸ್ರೋ ಒಳ ಹೋಗಲು ಮುಂದಾಗಿದ್ದಾರೆ. ಆದರೆ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳನ್ನು ತಡೆದ ಇಸ್ರೋ ಭದ್ರತಾ ಸಿಬ್ಬಂದಿ, ವಿದ್ಯಾರ್ಥಿಗಳ ತೋರಿಸಿದ ಪಾಸ್‌ಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಸಿಐಎಸ್‌ಎಫ್‌ನ ಇನ್‌ಸ್ಪೆಕ್ಟರ್‌ ಸತೀಶ್‌ ಚಂದ್ರ ಅವರು, ಕೂಡಲೇ ಪೀಣ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.