ಎಟಿಎಂ ಕೇಂದ್ರಗಳಿಗೆ ಹಣ ಜಮೆ ಮಾಡಲು ಬರುವ ಗ್ರಾಹಕರಿಗೆ ವಂಚನೆ ಹಣ ದೋಚುತ್ತಿದ್ದ ಚಾಲಾಕಿ ಮೋಸಗಾರನೊಬ್ಬ, ಪೊಲೀಸರಿಗೆ ಉಚಿತ ಜರ್ಕಿನ್‌ ವಿತರಣೆ ಸಲುವಾಗಿ ತಾನಾಗಿಯೇ ಠಾಣೆಗೆ ಬಂದು ಜೈಲು ಸೇರಿದ

ಬೆಂಗಳೂರು (ಸೆ.22):  ಎಟಿಎಂ ಕೇಂದ್ರಗಳಿಗೆ ಹಣ ಜಮೆ ಮಾಡಲು ಬರುವ ಗ್ರಾಹಕರಿಗೆ ವಂಚಿಸಿ ಹಣ ದೋಚುತ್ತಿದ್ದ ಚಾಲಾಕಿ ಮೋಸಗಾರನೊಬ್ಬ, ಪೊಲೀಸರಿಗೆ ಉಚಿತ ಜರ್ಕಿನ್‌ ವಿತರಣೆ ಸಲುವಾಗಿ ತಾನಾಗಿಯೇ ಠಾಣೆಗೆ ಬಂದು ಜೈಲು ಸೇರಿದ್ದಾನೆ.

ಬಿಎಚ್‌ಇಎಲ್‌ ಲೇಔಟ್‌ ನಿವಾಸಿ ನವೀನ್‌ ಕುಮಾರ್‌ ಬಂಧಿತನಾಗಿದ್ದು, ಆರೋಪಿಯಿಂದ ಹಣ ಹಾಗೂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ರಾಜರಾಜೇಶ್ವರಿ ನಗರ ಸಮೀಪ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಲು ಬಂದ ವ್ಯಕ್ತಿಯೊಬ್ಬರಿಗೆ ನವೀನ್‌ ವಂಚಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೈಕ್ , ಕಾರು ಕೊಡಿಸುವುದಾಗಿ ವಂಚನೆ, ಖರೀದಿಸಿದವರಿಗೆ ಪೊಲೀಸ್ ಠಾಣೆಯಿಂದ ಕರೆ!

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನವೀನ್‌, ಎಲೆಕ್ಟ್ರಿಕಲ್‌ ಕೆಲಸ ಮಾಡಿಕೊಂಡಿದ್ದ. ತಾಂತ್ರಿಕವಾಗಿ ನಿಪುಣನಾಗಿದ್ದ ಆತ, ಗೂಗಲ್‌ ಪ್ಲೈಸ್ಟೋರ್‌ನಲ್ಲಿ ವೈಪರ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆ ಆ್ಯಪ್‌ ಮೂಲಕ ನಕಲಿ ‘ಪೇಮೆಂಟ್‌ ಔಟ್‌’ ಸಂದೇಶ ಸೃಷ್ಟಿಸುತ್ತಿದ್ದ. ಎಟಿಎಂ ಕೇಂದ್ರದಲ್ಲಿ ಸಿಡಿಎಂ ಯಂತ್ರದಲ್ಲಿ ಹಣ ತುಂಬಲು ಬರುತ್ತಿದ್ದ ಗ್ರಾಹಕರನ್ನು ಎಟಿಎಂ ಬೂತ್‌ ಬಳಿ ತಡೆದು ಆತ, ‘ತುರ್ತಾಗಿ ಹಣ ಬೇಕಿದೆ. ಆದರೆ, ನನ್ನ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡುವ ಮಿತಿ ಮೀರಿದೆ. ನಗದು ಹಣ ಕೊಟ್ಟರೇ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸುವೆ’ ಎನ್ನುತ್ತಿದ್ದ. ಈ ಮಾತು ನಂಬಿದ ಜನರಿಗೆ ವಂಚಿಸಿ ಆತ, ವೈಪರ್‌ ಆ್ಯಪ್‌ ಮೂಲಕ ‘ಪೇಮೆಂಟ್‌ ಔಟ್‌’ ಎಂದು ನಕಲಿ ಹಣ ವರ್ಗಾವಣೆಯಾಗಿದೆ ಎಂದು ಸಂದೇಶವನ್ನು ತೋರಿಸಿ ವಂಚಿಸುತ್ತಿದ್ದ.

ಇದೇ ರೀತಿ ಆಗಸ್ಟ್‌ 12ರಂದು ರಾಜರಾಜೇಶ್ವರಿ ನಗರ ನಿಮಿಷಾಂಬ ಸರ್ಕಲ್‌ ಬಳಿಯ ಎಸ್‌ಬಿಐ ಬ್ಯಾಂಕ್‌ ಎಟಿಎಂ ಕೇಂದ್ರದ ಬಳಿಕ ಗ್ರಾಹಕರಿಗೆ ವಂಚಿಸಿದ್ದ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆತನ ಮುಖ ಚಹರೆ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಉತ್ತರಹಳ್ಳಿ ರಸ್ತೆ ಚನ್ನಸಂದ್ರದಲ್ಲಿ ಆರ್‌.ಆರ್‌.ನಗರ ಠಾಣೆ ಹೊಯ್ಸಳ ಸಿಬ್ಬಂದಿಯನ್ನು ಭೇಟಿಯಾದ ನವೀನ್‌, ‘ನಿಮಗೆ ಮಳೆಗಾಲದಲ್ಲಿ ಸುರಕ್ಷತೆಗೆ ಜರ್ಕಿನ್‌ ವಿತರಿಸುತ್ತೇನೆ’ ಎಂದಿದ್ದ. ಆಗ ನೀವು ಠಾಣೆಗೆ ಬಂದು ಇನ್‌ಸ್ಪೆಕ್ಟರ್‌ ಅವರನ್ನು ಭೇಟಿಯಾಗಿ ಎಂದಿದ್ದರು. ಅಂತೆಯೇ ಠಾಣೆಗೆ ಇನ್‌ಸ್ಪೆಕ್ಟರ್‌ ಶಿವಣ್ಣ ಅವರ ಭೇಟಿಗೆ ನವೀನ್‌ ಬಂದಿದ್ದ. ಆ ವೇಳೆ ಆತನ ನೋಡಿದ ಕ್ರೈಂ ಪೊಲೀಸ್‌ ಸಿಬ್ಬಂದಿಗೆ, ಎಟಿಎಂ ಗ್ರಾಹಕರ ವಂಚಕನಿಗೂ ನವೀನ್‌ ಮುಖಕ್ಕೂ ಹೋಲಿಕೆ ಬಗ್ಗೆ ಶಂಕೆ ಮೂಡಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿ ಬಂಧಿತನಾಗಿದ್ದಾನೆ. ಈಗ ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಬ್ಯಾಂಕ್‌ ಮತ್ತು ಎಟಿಎಂ ಬೂತ್‌ಗೆ ಬರುವ ಗ್ರಾಹಕರಿಗೆ ‘ಅಪರಿಚಿತ ವ್ಯಕ್ತಿಗಳ ಜತೆ ಹೆಚ್ಚು ಮಾತನಾಡಬೇಡಿ. ಹಣ ಡ್ರಾ ಅಥವಾ ಜಮೆ ಮಾಡಲು ಅಪರಿಚಿತರ ಸಹಾಯ ಪಡೆಯಬೇಡಿ. ಎಚ್ಚರಿಕೆ ವಹಿಸಿ’ ಜಾಗೃತಿ ಮೂಡಿಸಲಾಗುತ್ತಿದೆ.

-ಡಾ.ಸಂಜೀವ್‌ ಪಾಟೀಲ್‌, ಡಿಸಿಪಿ, ಪಶ್ಚಿಮ ವಿಭಾಗ