Asianet Suvarna News Asianet Suvarna News

ಬೆಂಗ್ಳೂರಿನ ಮಲ್ಲೇಶ್ವರಂ ಎಕ್ಸ್‌ಪ್ರೆಸ್‌ ಕ್ಲಿನಿಕ್‌ ದೇಶಕ್ಕೆ ಮಾದರಿ: ಸಿಎಂ ಬೊಮ್ಮಾಯಿ

ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದೇಶದ ಪ್ರಥಮ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಟೆಕ್‌ ಡಯಾಗ್ನಾಸ್ಟಿಕ್‌ ಸೇವೆಗಳ ಎಕ್ಸ್‌ಪ್ರೆಸ್‌ ಕ್ಲಿನಿಕ್‌ ಹಾಗೂ ಸ್ಕೈ ವಾಕ್‌ ಅನ್ನು ಶನಿವಾರ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Malleswaram Express Clinic Model for the Country Says CM Basavaraj Bommai grg
Author
First Published Sep 18, 2022, 7:49 AM IST

ಬೆಂಗಳೂರು(ಸೆ.18):  ಮಲ್ಲೇಶ್ವರಂನ ಹೈಟೆಕ್‌ ಡಯಗ್ನಾಸ್ಟಿಕ್‌ ಸೇವೆಗಳ ಎಕ್ಸ್‌ಪ್ರೆಸ್‌ ಕ್ಲಿನಿಕ್‌ ದೇಶಕ್ಕೆ ಮಾದರಿಯಾಗಿದ್ದು, ನಗರದಲ್ಲಿ ಈ ರೀತಿಯ 20 ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದೇಶದ ಪ್ರಥಮ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಟೆಕ್‌ ಡಯಾಗ್ನಾಸ್ಟಿಕ್‌ ಸೇವೆಗಳ ಎಕ್ಸ್‌ಪ್ರೆಸ್‌ ಕ್ಲಿನಿಕ್‌ ಹಾಗೂ ಸ್ಕೈ ವಾಕ್‌ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸದ್ಯ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಎರಡೂ ಸೇರಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಸೇವೆ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಸೇವೆಗಳನ್ನು ಪ್ರತ್ಯೇಕ ವ್ಯವಸ್ಥೆ ಮೂಲಕ ನಿರ್ವಹಣೆ ಮಾಡಲಾಗುವುದು. ನಗರದಲ್ಲಿ .80 ಕೋಟಿ ವೆಚ್ಚದಲ್ಲಿ 20 ಹೈಟೆಕ್‌ ಪಿಎಚ್‌ಸಿ ಕೇಂದ್ರ ನಿರ್ಮಾಣ ಆಗಲಿದೆ. ಮುಂದಿನ ಮೂರು ತಿಂಗಳಲ್ಲಿ ನಗರದ 243 ವಾರ್ಡ್‌ಗಳಲ್ಲೂ ನಮ್ಮ ಕ್ಲಿನಿಕ್‌ ಆರಂಭಿಸಲಾಗುವುದು ಎಂದರು.

ಬೆಂಗಳೂರು: ‘ನಮ್ಮ ಕ್ಲಿನಿಕ್‌’ಗೆ ವೈದ್ಯರು, ಜಾಗವೇ ಸಿಗುತ್ತಿಲ್ಲ..!

ಎಕ್ಸ್‌ಪ್ರೆಸ್‌ ಕ್ಲಿನಿಕ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಪರೀಕ್ಷೆಗೆ ನಿಗದಿಸಿರುವ ದರದಲ್ಲಿ ಬಿಪಿಎಲ್‌ ಪಡಿತರರಿಗೆ ಶೇ. 60 ಹಾಗೂ ಎಪಿಎಲ್‌ ಪಡಿತರರಿಗೆ ಶೇ. 40-50 ರಿಯಾಯಿತಿ ಸಿಗಲಿದೆ. ಇನ್ನು, ಪಿಪಿಪಿ ಮಾದರಿಯ ಜಯದೇವ ಆಸ್ಪತ್ರೆಯ ನಾಲ್ಕು ಕೇಂದ್ರವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಇವುಗಳ ಪೈಕಿ 50 ಹಾಸಿಗೆಗಳ ಒಂದು ಕೇಂದ್ರವು ಮಲ್ಲೇಶ್ವರದ ಕೆಸಿಜಿ ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಅದನ್ನೂ ಉದ್ಘಾಟಿಸುತ್ತೇನೆ ಎಂದು ತಿಳಿಸಿದರು.

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಈ ಮಾದರಿ ಅನುಕೂಲವಾಗಲಿದೆ. ನಗರದ ಆರೋಗ್ಯ ಸಮಸ್ಯೆಗೆ ಯಾರ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಅಶ್ವತ್ಥ ನಾರಾಯಣ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.

ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಮಲ್ಲೇಶ್ವರಂ ಕ್ಷೇತ್ರದ ಎಲ್ಲ ಏಳು ವಾರ್ಡ್‌ಗಳಲ್ಲಿ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗುವುದು. ಈಗಾಗಲೇ ಸುಬ್ರಹ್ಮಣ್ಯ ನಗರ ಮತ್ತು ಅರಮನೆ ನಗರಗಳಲ್ಲಿ ಇದರ ಕಾಮಗಾರಿ ನಡೆಯುತ್ತಿದೆ. ನಗರದ ಪ್ರತೀ ವಾರ್ಡ್‌ನಲ್ಲೂ ಕನಿಷ್ಠ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. ಈಗಾಗಲೇ ಮಲ್ಲೇಶ್ವರಂನ ವಾರ್ಡುಗಳಲ್ಲಿ ತಲಾ ಎರಡು ನಮ್ಮ ಕ್ಲಿನಿಕ್‌ ಇವೆ ಎಂದು ತಿಳಿಸಿದರು.

ಬಳ್ಳಾರಿ ವಿಮ್ಸ್‌ ದುರಂತ: ಬಡವರಿಗೆ ಬ್ಯಾನಿ ಬರಬಾರದ್ರಿ, ರೋಗಿಗಳ ಸಂಬಂಧಿಕರ ಅಳಲು

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಪಶ್ಚಿಮ ವಲಯದ ಆಯುಕ್ತ ದೀಪಕ್‌, ಆರೋಗ್ಯ ಆಯುಕ್ತ ತ್ರಿಲೋಕಚಂದ್ರ, ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ ಪ್ರಕಾಶ ಉಪಸ್ಥಿತರಿದ್ದರು. ಈ ವೇಳೆ ಆಸ್ಪತ್ರೆ ನಿರ್ಮಾಣಕ್ಕೆ ದೇಣಿಗೆ ನೀಡಿರುವ ಉದ್ಯಮಿಗಳನ್ನು ಸನ್ಮಾನಿಸಲಾಯಿತು.

ಎಸ್ಕಲೇಟರ್‌ ಸಹಿತ ಸ್ಕೈವಾಕ್‌

ಬಳ್ಳಾರಿ ರಸ್ತೆಯ ಪ್ಯಾಲೇಸ್‌ ಗುಟ್ಟಹಳ್ಳಿ ಬಸ್‌ ನಿಲ್ದಾಣದ ಸಮೀಪ ನಿರ್ಮಿಸಿದ ಸ್ಕೈವಾಕ್‌ ಎಸ್ಕಲೇಟರ್‌ ಸೌಲಭ್ಯವನ್ನು ಒಳಗೊಂಡಿದೆ. ಇದು ನಗರದಲ್ಲಿ ಎರಡನೇ ಸ್ಕೈವಾಕ್‌ ಅಗಿದ್ದು, ಬಳ್ಳಾರಿ ರಸ್ತೆಯಲ್ಲಿನ ವಾಹನ ದಟ್ಟಣೆ ಗಮನಿಸಿ, ಸಾರ್ವಜನಿಕರಿಗೆ ಈ ವ್ಯವಸ್ಥೆ ಒದಗಿಸಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
 

Follow Us:
Download App:
  • android
  • ios