ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೀರ್ತಿಗಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ರಾಜಕೀಯ ಜಿದ್ದಾಜಿದ್ದಿ ಆರಂಭಗೊಂಡಿದೆ. ಚುನಾವಣೆ ಹೊತ್ತಿನಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮತ್ತು ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡುವೆ ನಡೆಯುತ್ತಿರುವ ‘ಕ್ರೆಡಿಟ್‌ ವಾರ್‌’ನಿಂದಾಗಿ ಚುನಾವಣಾ ತೀವ್ರತೆ ಉಂಟಾಗಿದ್ದು, ಇಬ್ಬರ ನಡುವಿನ ಸಂಘರ್ಷವನ್ನು ಮತದಾರರು ಹೇಗೆ ಪರಿಗಣಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

 ಮಂಡ್ಯ ಮಂಜುನಾಥ

ಮಂಡ್ಯ : ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೀರ್ತಿಗಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ರಾಜಕೀಯ ಜಿದ್ದಾಜಿದ್ದಿ ಆರಂಭಗೊಂಡಿದೆ. ಚುನಾವಣೆ ಹೊತ್ತಿನಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮತ್ತು ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡುವೆ ನಡೆಯುತ್ತಿರುವ ‘ಕ್ರೆಡಿಟ್‌ ವಾರ್‌’ನಿಂದಾಗಿ ಚುನಾವಣಾ ತೀವ್ರತೆ ಉಂಟಾಗಿದ್ದು, ಇಬ್ಬರ ನಡುವಿನ ಸಂಘರ್ಷವನ್ನು ಮತದಾರರು ಹೇಗೆ ಪರಿಗಣಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಳವಳ್ಳಿ ಕ್ಷೇತ್ರದಲ್ಲಿ ಬಹುದಿನಗಳಿಂದಲೂ ಅಭಿವೃದ್ಧಿ ವಿಚಾರದಲ್ಲಿ ಹಾಲಿ-ಮಾಜಿ ಶಾಸಕರ ನಡುವೆ ರಾಜಕೀಯ ಕದನ ನಡೆಯುತ್ತಲೇ ಇದ್ದು, ಚುನಾವಣಾ ಹೊತ್ತಿನಲ್ಲಿ ಅದು ತಾರಕಕ್ಕೇರಿದೆ. ಅಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಗೆ ಮುಂದಾಗಿರುವ ಶಾಸಕರ ವಿರುದ್ಧ ಮಾಜಿ ಶಾಸಕರು ಮತ್ತವರ ಬೆಂಬಲಿಗರು ಸಿಡಿದೆದ್ದಿದ್ದಾರೆ. ಶಾಸಕರ ಈ ನಡೆ ಚುನಾವಣಾ ಗಿಮಿಕ್‌ನಂತೆ ಕಂಡುಬರುತ್ತಿದೆ.

ಉದ್ಘಾಟನೆಗೆ ತರಾತುರಿ:

ತಿಂಗಳಾಂತ್ಯಕ್ಕೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಅಷ್ಟರೊಳಗೆ ಶೇ.70 ರಿಂದ 80ರಷ್ಟುಕಾಮಗಾರಿ ಮುಗಿದಿರುವ ಯೋಜನೆಗಳನ್ನು ಪಟ್ಟಿಮಾಡಿಕೊಂಡು ತರಾತುರಿಯಲ್ಲಿ ಉದ್ಘಾಟಿಸುವುದಕ್ಕೆ ಶಾಸಕರು ಆತುರ ತೋರುತ್ತಿದ್ದಾರೆ. ಉದ್ಘಾಟನಾ ಕಲ್ಲಿನಲ್ಲಿ ತಮ್ಮ ಹೆಸರು ಬರಬೇಕೆಂಬ ಕಾರಣಕ್ಕೋ, ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸದ ಲಾಭ ಪಡೆಯುವ ಉದ್ದೇಶದಿಂದಲೋ ಶಾಸಕರು ಈ ಪ್ರಯತ್ನಕ್ಕಿಳಿದಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಮಾಡುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಶಾಸಕ ಡಾ.ಕೆ.ಅನ್ನದಾನಿ ವಿರೋಧವನ್ನು ಲೆಕ್ಕಿಸದೆ ಮೊನ್ನೆಯಷ್ಟೇ ಯತ್ತಂಬಾಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಉದ್ಘಾಟನೆ ನೆರವೇರಿಸಿದ್ದಾರೆ.

ವರುಣದಿಂದಲೇ ಸಿದ್ದು ಸ್ಪರ್ಧೆ: ಯಡಿಯೂರಪ್ಪ

ಏತ ನೀರಾವರಿ ಯೋಜನೆ ಚಾಲನೆಗೆ ಸಿದ್ಧತೆ:

ಇದಲ್ಲದೆ ಪ್ರಗತಿಯಲ್ಲಿರುವ ಬಿ.ಜಿ.ಪುರ ಹೋಬಳಿಯ ಪೂರಿಗಾಲಿ ಏತ ನೀರಾವರಿ ಯೋಜನೆಯನ್ನು ಉದ್ಘಾಟನೆ ಮಾಡುವುದಕ್ಕೂ ಶಾಸಕ ಡಾ.ಕೆ.ಅನ್ನದಾನಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಕಾಮಗಾರಿಯು 51 ಗ್ರಾಮಗಳ 25327 ಎಕರೆ ಪ್ರದೇಶಕ್ಕೆ ಹನಿ-ತುಂತುರು ನೀರಾವರಿ ಕಲ್ಪಿಸುವ, 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಕೆಲವೊಂದು ಕಾರಣಗಳಿಂದ ವಿಳಂಬವಾಗಿರುವ ಕಾಂಗಾರಿ ಜೂನ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವರು ಗೋವಿಂದ ಎಂ.ಕಾರಜೋಳ ತಿಳಿಸಿದ್ದರೂ ಅದನ್ನೂ ಚುನಾವಣೆ ಘೋಷಣೆಗೆ ಮುನ್ನವೇ ಉದ್ಘಾಟಿಸಲು ಹೊರಟಿರುವ ಶಾಸಕರ ನಿಲುವಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.

ಎಲ್ಲ ಕಾಮಗಾರಿಗಳೂ ಅಪೂರ್ಣ:

ಯತ್ತಂಬಾಡಿ ಮೊರಾರ್ಜಿ ವಸತಿ ಶಾಲೆ, ಪೂರಿಗಾಲಿ ಏತ ನೀರಾವರಿ ಯೋಜನೆ, ಕಿರುಗಾವಲು ಸೇರಿ 48 ಹಳ್ಳಿಗಳ ಕುಡಿಯುವ ನೀರಾವರಿ, ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಗಳನ್ನು ಪಿ.ಎಂ.ನರೇಂದ್ರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿಸಿದ್ದರು. ಈ ಯೋಜನೆಗಳ ಕಾಮಗಾರಿಗಳು ಅಪೂರ್ಣಗೊಂಡಿದ್ದರೂ ಶಾಸಕರು ಉದ್ಘಾಟನೆಗೆ ಮುಂದಾಗಿದ್ದಾರೆ. ಸ್ಥಗಿತಗೊಂಡಿರುವ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಗೆ ಹಣ ತರುವ ಪ್ರಯತ್ನವನ್ನು ನಡೆಸುತ್ತಿಲ್ಲ. ಕಳೆದ ಐದು ವರ್ಷಗಳಿಂದ ಯೋಜನೆಗಳ ಪ್ರಗತಿಗೆ ಹಣ ತಂದು ಪೂರ್ಣಗೊಳಿಸದೆ ರಾಜಕೀಯ ಕ್ರೆಡಿಟ್‌ಗಾಗಿ ಅಪೂರ್ಣ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆಂಬ ಆರೋಪ ಶಾಸಕರ ವಿರುದ್ಧ ಪ್ರಬಲವಾಗಿ ಕೇಳಿಬರುತ್ತಿದೆ.

ಕಾಂಗ್ರೆಸ್‌ ಗೆದ್ದರೆ ಕುಕ್ಕರ್‌ನಲ್ಲಿ ಬಾಂಬ್‌ ಇಡುವವರು ಎದ್ದು ಕುಳಿತುಕೊಳ್ಳುತ್ತಾರೆ: ಸಿ.ಟಿ.ರವಿ

ಅವರೇ ಹಾಕಿಕೊಟ್ಟಸಂಪ್ರದಾಯ:

ಈ ಕುರಿತಾಗಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಪ್ರಶ್ನಿಸಿದರೆ, 2018ರಲ್ಲಿ ಅಂಬೇಡ್ಕರ್‌ ಭವನ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಉದ್ಘಾಟನೆ ಮಾಡಿದರು. ಪೂರ್ಣಗೊಳ್ಳದ ಬೆಳಕವಾಡಿ ಬಸ್‌ ನಿಲ್ದಾಣಕ್ಕೆ ಚಾಲನೆ ಕೊಟ್ಟರು. ಪೂರಿಗಾಲಿ ಏತ ನೀರಾವರಿ ಯೋಜನೆ ಮಾಜಿ ಶಾಸಕರು ತಂದ ಯೋಜನೆ ಇರಬಹುದು. ಅವರ ಕಾಲದಲ್ಲಿ ಅನುಮೋದನೆ ಸಿಕ್ಕಿದ್ದು ಬಿಟ್ಟರೆ ಬೇರೆ ಏನಾಗಿತ್ತು. ಅದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 200 ಕೋಟಿ ರು.ಹಣ ತಂದು ಕೆಲಸ ಮಾಡಿಸಿದೆ. ಈಗ ಶೇ.95ರಷ್ಟುಕೆಲಸ ಪೂರ್ಣಗೊಂಡಿದೆ. ಅದರ ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ.

ಹೆದ್ದಾರಿ ಪೂರ್ಣಗೊಂಡಿದೆಯೇ?

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡೇ ಇಲ್ಲ. ಅದನ್ನು ಪ್ರಧಾನಿಯವರು ಉದ್ಘಾಟನೆ ಮಾಡಲಿಲ್ಲವೇ. ಅದನ್ನು ಏಕೆ ಪ್ರಶ್ನಿಸಲಿಲ್ಲ. ಅದನ್ನು ತಡೆಯುವ ಪ್ರಯತ್ನವನ್ನೇಕೆ ಮಾಡಲಿಲ್ಲ. ಮಳವಳ್ಳಿ ಕುಡಿಯುವ ನೀರಿನ ಯೋಜನೆ ಹಾಳಾಗಿದ್ದು ಮಾಜಿ ಶಾಸಕರಿಂದಲೇ. ಅವರು ಕಿಕ್‌ ಬ್ಯಾಕ್‌ ಪಡೆದುಕೊಂಡು ಹೊರಟುಹೋದರು. 70 ಕೋಟಿ ರು. ವೆಚ್ಚದ ಯೋಜನೆ ವ್ಯರ್ಥವಾಯಿತು. ಅದಕ್ಕೆ ನಾನು ಹೊಣೆಗಾರನೇ ಎಂದು ದೂಷಿಸಿದರು.

ತಾವು ಮಂಜೂರು ಮಾಡಿಸಿರುವ ಯೋಜನೆಗಳನ್ನು ಉದ್ಘಾಟಿಸಲು ಮುಂದಾಗಿರುವ ಶಾಸಕರ ವಿರುದ್ಧ ಮಾಜಿ ಶಾಸಕರು ತಿರುಗಿಬಿದ್ದಿದ್ದಾರೆ. ಉದ್ಘಾಟನೆಯ ಕಲ್ಲಿನಲ್ಲಿ ತಮ್ಮ ಹೆಸರನ್ನು ದಾಖಲಿಸಲು ಆಸೆಯನ್ನು ಹೊತ್ತಿದ್ದ ಮಾಜಿ ಶಾಸಕರ ಕನಸಿಗೆ ಕಲ್ಲು ಹಾಕುತ್ತಿರುವುದು ಅವರಿಂದ ಸಹಿಸಲಾಗುತ್ತಿಲ್ಲ. ಹಾಲಿ-ಮಾಜಿಗಳ ಕ್ರೆಡಿಟ್‌ ವಾರ್‌ಗೆ ಜನರು ಕೊಡುಗೆ ಉತ್ತರವೇನು ಎನ್ನುವುದನ್ನು ಚುನಾವಣೆವರೆಗೆ ಕಾದುನೋಡಬೇಕಿದೆ.

----------------------

ಇದೆಲ್ಲಾ ಅವರು ಹಾಕಿಕೊಟ್ಟಸಂಪ್ರದಾಯ. ನಾನೇನೂ ಕದ್ದು ಮುಚ್ಚಿ ಮಾಡುತ್ತಿಲ್ಲ. ಜಿಲ್ಲಾಡಳಿತ, ಸರ್ಕಾರಕ್ಕೆ ತಿಳಿಸಿ ಅನುಮತಿ ಪಡೆದುಕೊಂಡೇ ಮಾಡುತ್ತಿದ್ದೇನೆ. ಅದು ನನ್ನ ಶಿಷ್ಠಾಚಾರ. ಪ್ರಶ್ನಿಸಲು, ತಡೆಯೊಡ್ಡಲು ಇವರು ಯಾರು, ಏನಿದೆ ಅಧಿಕಾರ. ಸರ್ಕಾರ ಈ ವಿಷಯವಾಗಿ ನನ್ನನ್ನು ಪ್ರಶ್ನಿಸಲಿ. ಆಗ ನಾನು ಉತ್ತರ ಕೊಡುತ್ತೇನೆ.

- ಡಾ.ಕೆ.ಅನ್ನದಾನಿ, ಶಾಸಕರು, ಮಳವಳ್ಳಿ

----------

ಯಾರಿಗೆ ಜನಪರ, ರೈತಪರ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಬೇಕೆನ್ನುವವರ ಪರಿಕಲ್ಪನೆ, ಆಲೋಚನೆಗಳೇ ಬೇರೆಯಾಗಿರುತ್ತವೆ. ಕಲ್ಲಿನಲ್ಲಿ ಹೆಸರು ಬರಬೇಕೆಂಬ ಒಂದೇ ಉದ್ದೇಶದಿಂದ ಯೋಜನೆಗಳನ್ನು ಹಾಳುಗೆಡವಿ ಚುನಾವಣಾ ಭಯದಿಂದ ಉದ್ಘಾಟನೆ ಮಾಡುತ್ತಿರುವುದನ್ನು ಬಿಟ್ಟರೆ ಶಾಸಕರಿಗೆ ಯೋಜನೆಗಳ ಬಗ್ಗೆ ಇಚ್ಛಾಶಕ್ತಿಯೂ ಇಲ್ಲ, ಬದ್ಧತೆಯೂ ಇಲ್ಲ. ಮಳವಳ್ಳಿಗೆ ಒಂದು ಯೋಜನೆಯೂ ಇಲ್ಲ.

- ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರು, ಮಳವಳ್ಳಿ