ಮಲಪ್ರಭಾ-ಘಟಪ್ರಭಾ ನದಿಗಳ ಒತ್ತುವರಿ ತೆರವು ಶೀಘ್ರ
* ತುಪ್ಪರಿಹಳ್ಳಿ ಸರ್ವೇ ಪೂರ್ಣ, ಡಿಪಿಆರ್ ಸಿದ್ಧತೆ
* ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ಒತ್ತುವರಿ ತೆರವು ಆರಂಭ
* ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ದೃಢ ನಿಲುವು
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ(ಆ.23): ಉತ್ತರ ಕರ್ನಾಟಕಕ್ಕೆ ‘ಪ್ರವಾಹ ಪೀಡಿತ ಪ್ರದೇಶ’ ಎನ್ನುವ ಹಣೆಪಟ್ಟಿ ಅಂಟಿಸಿರುವ ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಒತ್ತುವರಿ ತೆರವುಗೊಳಿಸುವ ಮೂಲಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಲಸಂಪನ್ಮೂಲ ಇಲಾಖೆ ಇದೀಗ ದೃಢ ಹೆಜ್ಜೆ ಇಟ್ಟಿದೆ.
ಮಳೆಗಾಲದಲ್ಲಿ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಮಲಪ್ರಭಾ ನದಿಯನ್ನು ಅತ್ಯಂತ ಭೀಕರಗೊಳಿಸುತ್ತವೆ. ಹಾಗಾಗಿ ಆದ್ಯತೆಯ ಮೇರೆಗೆ ಬೆಣ್ಣಿಹಳ್ಳದಲ್ಲಿನ ಕಂಟಿ, ಕಸವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ಅದರ ಸರ್ವೆ ನಡೆಸಿ ಇನ್ನುಳಿದ ಒತ್ತುವರಿ ತೆರವು ಮಾಡುವುದು ಬಾಕಿ ಉಳಿದಿದೆ. ತುಪ್ಪರಿಹಳ್ಳದ ಸರ್ವೆ ಕಾರ್ಯ ಮುಗಿದಿದ್ದು, ಒತ್ತುವರಿ ತೆರವು ಮತ್ತು ಆ ಅಪಾರ ಪ್ರಮಾಣದ ನೀರು ಬಳಸಿಕೊಳ್ಳಲು ಡಿಪಿಆರ್ ಕೂಡ ಸಿದ್ಧವಾಗಿದೆ.
ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ಸರ್ವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂದಿನ ವಾರದಲ್ಲಿ ಸರ್ವೆ ಆರಂಭವಾಗಲಿದೆ. ಡ್ರೋಣ್ ಇತ್ಯಾದಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಎರಡೂ ನದಿಗಳ ಗಡಿ ಗುರುತಿಸುವ ಸರ್ವೆ ಕಾರ್ಯ ನಡೆಯಲಿದೆ.
ಮಹಾರಾಷ್ಟ್ರ ಮಳೆಗೆ ಬೆಳಗಾವಿ ಇನ್ನೂ ತತ್ತರ
ಇದಕ್ಕಾಗಿ ಬೆಳಗಾವಿ ವಿಭಾಗಾಧಿಕಾರಿ ನೇತೃತ್ವದಲ್ಲಿ ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲಾಧಿಕಾರಿಗಳು, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಸರ್ವೆ ಇಲಾಖೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದ್ದು, ವಿವಿಧ ಮಟ್ಟದ ಸಭೆಗಳನ್ನು ಮಾಡಿ ಕಾರ್ಯಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಒಂದೊಂದೇ ಕಾರ್ಯಗಳು ಭರದಿಂದ ಸಾಗಿದ್ದು, ಇಷ್ಟರಲ್ಲೇ ಎರಡೂ ನದಿಗಳ ಸರ್ವೆ ಕಾರ್ಯ ಮುಗಿದು ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಲಿದ್ದಾಗಲಿದ್ದಾರೆ.
ಈ ಒತ್ತುವರಿ ತುಸು ದುಬಾರಿ ಹೊಣೆಗಾರಿಕೆ. ಆದಾಗ್ಯೂ ಈ ಕೆಲಸವನ್ನು ಜಲಸಂಪನ್ಮೂಲ ಇಲಾಖೆ ಆಧ್ಯತೆಯ ಮೇಲೆ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ನದಿಗಳ ಪಾತ್ರದಲ್ಲಿನ ಪ್ರವಾಹ ಸಮಸ್ಯೆಗೆ ಶಾಶ್ವತ ತೆರೆ ಬೀಳುವ ಎಲ್ಲ ಲಕ್ಷಣಗಳೂ ಇವೆ.
ಕಾರಜೋಳ ದೃಢ ಹೆಜ್ಜೆ:
2007, 2009, 2014, 2019 ಮತ್ತು 2021 ಸಾಲಿನಲ್ಲಿ ಪ್ರವಾಹ ಇನ್ನಿಲ್ಲದಂತೆ ಕಾಡಿದೆ. ತುಪ್ಪರಿಹಳ್ಳ, ಬೆಣ್ಣಿಹಳ್ಳ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಉಕ್ಕೇರಿ ಈ ನದಿ ಹಾಗೂ ಹಳ್ಳಗಳ ಪಾತ್ರದಲ್ಲಿ ಹಳ್ಳಿಗಳು ಜಲಾವೃತವಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜೀವಹಾನಿಯಾಗುವ ಜತೆಗೆ ಲಕ್ಷಾವಧಿ ಜನತೆ ನೆರೆ ಸಂತ್ರಸ್ತರಾಗಿದ್ದರು.
ಹೀಗೆ ನೆರೆ ಉಕ್ಕೇರಿದಾಗಲೆಲ್ಲ ಜನತೆಯನ್ನು ರಕ್ಷಿಸುವ, ತಾತ್ಕಾಲಿಕ ಪರಿಹಾರ ಕಲ್ಪಿಸುವ ಜತೆಗೆ ಜಲಾವೃತವಾದ ಗ್ರಾಮಗಳನ್ನು ಸ್ಥಳಾಂತರಿಸುತ್ತ ಹೈರಾಣಾಗಿರುವ ರಾಜ್ಯ ಸರ್ಕಾರ ಈ ಪ್ರವಾಹ ಸಮಸ್ಯೆಗೆ ಮೂಲ ಕಾರಣ ನದಿ, ಹಳ್ಳಗಳ ಒತ್ತುವರಿ ಎನ್ನುವ ವಾಸ್ತವತೆ ಅರಿತು, ಈ ಒತ್ತುವರಿ ತೆರವು ಮಾಡದ ಹೊರತು ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಅಸಾಧ್ಯ ಎಂದು ಮನಗಂಡಿತ್ತು.
ಪ್ರವಾಹಕ್ಕೆ ತತ್ತರಿಸಿದ ಗೋಕಾಕ್; ಪರಿಹಾರ ಕೇಂದ್ರದಲ್ಲಿ ಬಾಣಂತಿ ಪರದಾಟ
ಹಿಂದಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮಲಪ್ರಭಾ, ಘಟಪ್ರಭಾ ನದಿಗಳು ಮತ್ತು ಧಾರವಾಡ ಜಿಲ್ಲೆಯಲ್ಲಿ ಹರಿಯುವ ತುಪ್ಪರಿ ಹಳ್ಳ, ಬೆಣ್ಣಿಹಳ್ಳಗಳ ಒತ್ತುವರಿ ತೆರವುಗೊಳಿಸುವುದಾಗಿ ಘೋಷಿಸಿತ್ತು. ಆದರೆ, ಸರ್ಕಾರದ ಅಸ್ಥಿರತೆ, ಖಾತೆಗಳ ಬದಲಾವಣೆ ಇತ್ಯಾದಿ ಕಾರಣಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಉತ್ತರ ಕರ್ನಾಟಕದವರೇ ಆದ ಹಿರಿಯ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆಯ ಕರ್ಣಧಾರತ್ವ ವಹಿಸಿಕೊಳ್ಳುತ್ತಿದ್ದಂತೆ ಈ ನದಿಗಳ ಒತ್ತುವರಿ ತೆರವು ಯೋಜನೆ ಮೈಕೊಡವಿ ಎದ್ದು ಕುಳಿತಿದೆ.
ಒತ್ತುವರಿ ಸಮಸ್ಯೆ:
ದಾಖಲೆಯ ಪ್ರಕಾರ ಮಲಪ್ರಭಾ ನದಿ ಸುಮಾರು 360 ಕಿಮೀ ಉದ್ದ ಮತ್ತು 170 ಮೀಟರ್ ಅಗಲವಿದೆ. ಆದರೆ ಒಂದೊಂದುಕಡೆ ಅದು 50, 20 ಮೀಟರ್‌ಗೆ ಕುಗ್ಗಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದೇ ನದಿ ಇಕ್ಕೆಲದ ಭೂಮಿ, ಗ್ರಾಮಗಳಿಗೆ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟು ಮಾಡುತ್ತಿದೆ. ಈ ಅಪಾರ ಪ್ರಮಾಣದ ಒತ್ತುವರಿಯೇ ಈ ಎಲ್ಲ ಸಮಸ್ಯೆಗೆ ಕಾರಣ. ಘಟಪ್ರಭಾ ನದಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಈ ವಾಸ್ತವ ಅರಿತಿರುವ ಸರ್ಕಾರ ಒತ್ತುವರಿ ತೆರವು ಎನ್ನುವ ಮಹಾ ಯಜ್ಞಕ್ಕೆ ಕೈಹಾಕಿದೆ.
ಕಳೆದ ಮೂರ್ನಾಲ್ಕು ಬಾರಿ ತಲೆದೋರಿದ ಪ್ರವಾಹ ಪರಿಸ್ಥಿತಿಯಿಂದ ಜನತೆ ಅನುಭವಿಸಿದ ನೋವು, ಸಂಕಷ್ಟ ಅರಿತಿರುವೆ. ಸದಾ ಅವರೊಂದಿಗೆ ನಿಂತು ರಕ್ಷಣೆ, ಪರಿಹಾರ, ಸ್ಥಳಾಂತರ ಇತ್ಯಾದಿ ಕ್ರಮಗಳನ್ನು ಕೈಕೊಂಡಿರುವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನದಿಗಳ ಒತ್ತುವರಿ ತೆರವು ಮಾಡುವುದು ಅತ್ಯಗತ್ಯವಿದೆ. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಷ್ಟರಲ್ಲಿಯೇ ನದಿಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.