ಬೆಂಗಳೂರು :  ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಲ್‌) ತೆರಳುವ ಮುಖ್ಯ ಸಂಪರ್ಕ ರಸ್ತೆಯನ್ನು ನಾಲ್ಕು ಪಥದಿಂದ 10 ಪಥಗಳಿಗೆ ವಿಸ್ತರಿಸುವ ಕಾಮಗಾರಿ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಎರಡು ವರ್ಷಗಳ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸೋಮವಾರದಿಂದ 1.4 ಕಿ.ಮೀ. ಉದ್ದದ ಮುಖ್ಯ ಸಂಪರ್ಕ ರಸ್ತೆಯ ವಿಸ್ತರಣೆ ಕಾಮಗಾರಿ ಆರಂಭವಾಗಿದೆ. ಸಮನಾಂತರವಾಗಿರುವ ಆರು ಪಥದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಆಗಮನ ಮತ್ತು ನಿರ್ಗಮನಕ್ಕೆ ತಲಾ ಮೂರು ಪಥ ಕಲ್ಪಿಸಲಾಗಿದೆ. ಈ ಮುಖ್ಯಸಂಪರ್ಕ ರಸ್ತೆ ಅಗಲೀಕರಣ ಕಾಮಗಾರಿ 2021ರ ಆರಂಭಕ್ಕೆ ಪೂರ್ಣಗೊಳ್ಳಲಿದ್ದು, ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಬಿಐಎಲ್‌ ತಿಳಿಸಿದೆ.

ಬದಲಿ ಮಾರ್ಗ:

ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಟ್ರಂಪೆಟ್‌ ಇಂಟರ್‌ ಚೇಂಜ್‌ ನಂತರ ಮೊದಲ ವೃತ್ತದಲ್ಲಿ ಬಲಕ್ಕೆ ತಿರುಗಿ ನಂತರ ದಕ್ಷಿಣ ಸಂಪರ್ಕ ರಸ್ತೆ ಪ್ರವೇಶಿಸಿ ಟರ್ಮಿನಲ್‌ ತಲುಪಬೇಕು. ಅಂತೆಯೇ ವಿಮಾನ ನಿಲ್ದಾಣದಿಂದ ನಿರ್ಗಮನ ಗೇಟ್‌ಗಳಿಂದ ಹೊರಬರುವ ವಾಹನಗಳು ಟರ್ಮಿನಲ್‌ನಿಂದ ಪ್ರಸ್ತುತ ನಿರ್ಗಮನ ಮಾರ್ಗದಲ್ಲೇ ಮುಂದೆ ಸಾಗಿ ಬಳಿಕ ಪರ್ಯಾಯ ಮಾರ್ಗವಾದ ದಕ್ಷಿಣ ಸಂಪರ್ಕ ರಸ್ತೆಯ ಮೂಲಕವೇ ಹೊರಬರಬೇಕು.