ಮಂಗಳೂರು: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾದ ಮಹೇಶ್ ವಿಕ್ರಮ್ ಹೆಗ್ಡೆ
ಬಡ ಮಕ್ಕಳಿಗಾಗಿಯೇ ವಿಕ್ರಮ ಫೌಂಡೇಶನ್ ಹುಟ್ಟುಹಾಕಿದ ವಿಕ್ರಮ ಹೆಗ್ಡೆ
ದಕ್ಷಿಣ ಕನ್ನಡ(ಆ.13): ಈ ವರ್ಷ ವಿಕ್ರಮ ಫೌಂಡೇಶನ್ 50 ಶಾಲೆಗಳ 100 ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂಬ ಆಶಯದೊಂದಿಗೆ ಹುಟ್ಟಿಕೊಂಡಿದ್ದು ವಿಕ್ರಮ ಫೌಂಡೇಶನ್. ಬಡತನವಿದ್ದಾಗ ವಿದ್ಯಾಭ್ಯಾಸಕ್ಕೆ ಅದೆಷ್ಟು ಒದ್ದಾಡಬೇಕು ಅನ್ನೋದು ಅನುಭವಿಸಿದ್ದವರು ವಿಕ್ರಮ ಫೌಂಡೇಶನ್‌ನ ಮಹೇಶ್ ವಿಕ್ರಮ ಹೆಗ್ಡೆ. ಅಮ್ಮನ ಕಿವಿಯೋಲೆ ಅಡವಿಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲವದು. ತಮಗೆ ಎದುರಾದ ಕಷ್ಟ ಮುಂದೆ ಯಾರಿಗೂ ಬರಬಾರದು ಎಂದು ಮನಸಲ್ಲಿಯೇ ಆಲೋಚಿಸಿದ್ದರು.
ಅಕ್ಷರ ಕಲಿಯಲು ಬಡತನ ಅಡ್ಡಿಯಾಗಬಾರದು ಎಂದು ಅಂದುಕೊಂಡಿದ್ದ ವಿಕ್ರಮ ಹೆಗ್ಡೆ ಬಡ ಮಕ್ಕಳಿಗಾಗಿಯೇ ವಿಕ್ರಮ ಫೌಂಡೇಶನ್ ಹುಟ್ಟುಹಾಕಿದರು. ಆರಂಭದಲ್ಲಿ ತಮ್ಮ ಫೌಂಡೇಶನ್ ಮೂಲಕ ಒಂದಷ್ಟು ಬಡವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯದಲ್ಲಿ ನಿರತರಾಗಿದ್ದರು. ಇದೀಗ ತಮ್ಮ ಕನಸಿನ್ನ ಸಾಕಾರಗೊಳಿಸಲು ಮುಂದಾಗಿದ್ದು, 100 ಬಡ ಮಕ್ಕಳನ್ನ ದತ್ತು ತೆಗೆದುಕೊಂಡು, ಅವರ ವಿದ್ಯಾಭ್ಯಾಸದ ಖರ್ಚು ಭರಿಸಿದ್ದಾರೆ.
ಮಂಗಳೂರು: ಮಕ್ಕಳ ರಾಖಿ ಕಿತ್ತೆಸೆದಿದ್ದಕ್ಕೆ ಕಿಡಿ, ಪೋಷಕರಿಂದ ಶಿಕ್ಷಕರಿಗೆ ತರಾಟೆ..!
ವರ್ಷಕ್ಕೆ ಒಂದು ಸಾವಿರ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವ ಆಶಯ ಹೊಂದಿರುವ ವಿಕ್ರಮ ಫೌಂಡೇಶನ್ ಆರಂಭಿಕವಾಗಿ ಈ ವರ್ಷ ನೂರು ಮಕ್ಕಳನ್ನು ದತ್ತು ಪಡೆದು ತನ್ನ ಕನಸಿನ ಮೊದಲ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ 'ಸಾವಿರದ' ಕನಸನ್ನು ನನಸು ಮಾಡುವತ್ತ ಸಾಗಲು ವಿಕ್ರಮ ಹೆಗ್ಡೆ ನಿಶ್ಚಯಿಸಿದ್ದಾರೆ.
ತಮ್ಮ ಜನ್ಮಭೂಮಿ ದಕ್ಷಿಣ ಕನ್ನಡದಿಂದ ಈ ಸತ್ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಶಾಲಾ ಮಂಡಳಿಯ ಅಭಿಪ್ರಾಯ ಸಂಗ್ರಹಿಸಿ ಅವರು ಹೇಳಿದ ಮಕ್ಕಳ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಕಷ್ಟದಲ್ಲಿರೋ 100 ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಈ ಸತ್ಕಾರ್ಯಕ್ಕೆ ತಮ್ಮದೇ ದುಡಿಮೆಯ ಹಣದಲ್ಲಿ ಮಕ್ಕಳನ್ನು ಓದಿಸಬೇಕೆಂಬ ಕಾರಣದಿಂದ ಫೌಂಡೇಶನ್ ಯರಿಂದಲೂ ದೇಣಿಗೆ ಕೇಳಿಲ್ಲ.. ಈ 'ವಿದ್ಯಾ ಯಜ್ಞ'ಕ್ಕೆ ಎಲ್ಲರ ಶುಭ ಹಾರೈಕೆ ಕೋರಿದ್ದಾರೆ. ಆ ಬಡ ಮಕ್ಕಳಿಗೆ ಹರಸಿ ಹಾರೈಸಿ.