ಸಮಾಜಘಾತುಕ ಚಟುವಟಿಕೆಗಳ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮತ್ತೆ ಗಡಿಪಾರು ಮಾಡಲಾಗಿದೆ. ಈ ಗಡಿಪಾರು ಆದೇಶವನ್ನು ಪ್ರಶ್ನಿಸಿ ತಿಮರೋಡಿ ಎರಡನೇ ಬಾರಿಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸದ್ಯ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಬೆಳ್ತಂಗಡಿ: ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮತ್ತೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಅವರನ್ನು ಗಡಿಪಾರು ಮಾಡಲಾಗಿತ್ತು. ಇದೀಗ ಗಡೀಪಾರು ಆದೇಶ ಪ್ರಶ್ನಿಸಿ ಮತ್ತೊಮ್ಮೆ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಮೂಲಕ ಗಡಿಪಾರು ಆದೇಶ ರದ್ದು ಕೋರಿ ತಿಮರೋಡಿ ಎರಡನೇ ಬಾರಿಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರತಿವಾದಿಗಳನ್ನಾಗಿ ಉಲ್ಲೇಖಿಸಿದ್ದಾರೆ. 16-12-2025 ರಿಂದ 16-09-2026 ರವೆಗೆ ಗಡಿಪಾರು ಆದೇಶ ಇದ್ದು, 10 ತಿಂಗಳ ಅವಧಿಗೆ ಮಹೇಶ್ ತಿಮರೋಡಿ ಗಡೀಪಾರು ಮಾಡಲಾಗಿದೆ. ಗಡೀಪಾರು ಆದೇಶದ ಬಳಿಕ ತಿಮರೋಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಈ ಹಿಂದೆ ಏನಾಗಿತ್ತು?
ಸೆ.18ರಂದು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಅವರು ತಿಮರೋಡಿಯನ್ನು 2025ರ ಸೆ.18ರಿಂದ 2026ರ ಸೆ.17ರವರೆಗೆ ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಈ ಗಡಿಪಾರು ಆದೇಶ ರದ್ದುಗೊಳಿಸುವಂತೆ ಕೋರಿ ತಿಮರೋಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್, ಈ ಗಡಿಪಾರು ಆದೇಶವನ್ನು ರದ್ದುಗೊಳಿಸಿ, ಕಾನೂನು ಪ್ರಕಾರ ಹೊಸ ಪ್ರಕ್ರಿಯೆ ನಡೆಸಿ ಆದೇಶ ಮಾಡುವಂತೆ ಸೂಚಿಸಿತ್ತು. ಹೈಕೋರ್ಟ್ ಸೂಚನೆಯಂತೆ, ಪುತ್ತೂರು ಎಸಿ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳ ಅಡಿಯಲ್ಲಿ ತಿಮರೋಡಿ ಗಡಿಪಾರು ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿ, ಡಿ.7ರಂದು ಗಡಿಪಾರು ನೋಟಿಸ್ ನೀಡಿದ್ದರು. ಅದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ತಿಮರೋಡಿ, ತಮ್ಮ ವಕೀಲರ ಮೂಲಕ ಉಪ ವಿಭಾಗಾಧಿಕಾರಿ ಎದುರು ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಮರೋಡಿ ಗಡೀಪಾರಿಗೆ ಸೂಕ್ತ ಕಾರಣಗಳನ್ನು ನೀಡಿ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ, ತಿಮರೋಡಿ ವಿರುದ್ಧ ಎರಡನೇ ಬಾರಿಗೆ ಗಡಿಪಾರು ಆದೇಶವನ್ನು ಹೊರಡಿಸಲಾಗಿತ್ತು.
ತಿಮರೋಡಿ ವಿರುದ್ಧ ಬಂಧನ ವಾರಂಟ್ ಜಾರಿ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಜಾತಿ ಬಗ್ಗೆ ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ. ಬೆಳ್ತಂಗಡಿ ಪೊಲೀಸರು ಈ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ತಿಮರೋಡಿಯವರು ವಿಚಾರಣೆಗೆ ಪದೇ ಪದೆ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಅವರು ಈಗಾಗಲೇ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿ ಪೊಲೀಸರಿಗೆ ಸಿಗದಂತೆ ತಲೆ ಮರೆಸಿಕೊಂಡಿದ್ದಾರೆ.


