ಬೆಂಗಳೂರು(ಫೆ.01): ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೊಳಿಸಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಮಹಾತ್ಮಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದ ಬ್ರಿಗೇಡ್‌ ರಸ್ತೆ ಸಮೀಪ ಶಾಂತಿನಗರ ಸಿಟಿಜನ್ಸ್‌ ಫೋರಂ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರ ವಿಚಾರ ಧಾರೆಗಳನ್ನು ಕೊಲ್ಲಲು ಅಂದು ಗೋಡ್ಸೆ ಮೂರು ಗುಂಡುಗಳನ್ನು ಹಾರಿಸಿದ್ದ. ಪ್ರಸ್ತುತ ಅದೇ ವಿಚಾರ ಧಾರೆಯುಳ್ಳ ಸಂವಿಧಾನವನ್ನು ಸರ್ವನಾಶ ಮಾಡಲು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಜಾರಿಗೊಳಿಸಲಾಗುತ್ತಿದೆ.

ಧಾರಾ ಮುಹೂರ್ತ ಮುಗಿಸಿ ಪರೀಕ್ಷೆ ಬರೆದ ಮದುಮಗಳು!

ಭಾರತ ಸಂವಿಧಾನವನ್ನು ಹಲವು ರಾಷ್ಟ್ರಗಳು ಮೆಚ್ಚಿಕೊಂಡಿವೆ. ಅದರಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನಮಾನ ನೀಡಲಾಗಿದೆ. ಆದರೆ ಸಂವಿಧಾನ ವಿರೋಧಿಗಳು ತಮ್ಮ ಚಾಣಾಕ್ಷತನದಿಂದ ಜನರನ್ನು ಮರುಳು ಮಾಡಿ ನಾಶ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ರಿಟಿಷರ ಚಮಚಾಗಳು ಇಂದು ಅಧಿಕಾರ ನಡೆಸುತ್ತಿರುವುದು ದುರಾದೃಷ್ಟಕರ. ಈಗ ಸಂವಿಧಾನ ನಾಶ ಮಾಡಲು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಜಾರಿಗೊಳಿಸಲಾಗುತ್ತಿದೆ. ನಮಗೆ ಹಕ್ಕನ್ನು ಸಂವಿಧಾನ ನೀಡಿದೆ. ಸಂವಿಧಾನವೇ ಇಲ್ಲವೆಂದರೆ ನಮ್ಮದೇ ಆದ ಆಸ್ತಿತ್ವ ಇರುವುದಿಲ್ಲ. ನಮ್ಮ ಭೂಮಿ ಹರಿದು ಹಂಚಿಹೋಗಲಿದೆ. ಆದ್ದರಿಂದ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಇಂತಹ ಕಾಯ್ದೆಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ದೇಶದ ಪ್ರತಿ ಬೀದಿಯಲ್ಲೂ ಹೋರಾಡಬೇಕು. ನಮ್ಮ ಕೋಪ ಕೇಂದ್ರ ಸರ್ಕಾರಕ್ಕೆ ಮುಟ್ಟುವಂತೆ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಶಾಸಕ ಎನ್‌.ಎ.ಹ್ಯಾರೀಸ್‌, ಇನ್‌ಫ್ಯಾಂಟ್‌ ಚಚ್‌ರ್‍ ಫಾ.ಜೋಸೆಫ್‌, ಆಹಾರ ತಜ್ಞ ಎ.ಟಿ.ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.