ಬೆಳಗಾವಿ ಗಡಿ ವಿಚಾರದಲ್ಲಿ ಅನಗತ್ಯವಾಗಿ ನೆರೆಯ ಮಹಾರಾಷ್ಟ್ರದವರು ಪ್ರದರ್ಶಿಸುತ್ತಿರುವ ತಮ್ಮ ಉದ್ಧಟತನವನ್ನು ಕೈ ಬಿಡುವುದು ಒಳ್ಳೆಯದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ (ಡಿ.03): ಬೆಳಗಾವಿ ಗಡಿ ವಿಚಾರದಲ್ಲಿ ಅನಗತ್ಯವಾಗಿ ನೆರೆಯ ಮಹಾರಾಷ್ಟ್ರದವರು ಪ್ರದರ್ಶಿಸುತ್ತಿರುವ ತಮ್ಮ ಉದ್ಧಟತನವನ್ನು ಕೈ ಬಿಡುವುದು ಒಳ್ಳೆಯದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ ನೀಡಿದರು. ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶುಕ್ರವಾರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾಡಿನ ರಕ್ಷಣೆಗೆ ಸರ್ಕಾರ ಬದ್ಧ: ಗಡಿ ವಿಚಾರದ ಸಂಬಂದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಆರು ಸಚಿವರ ಸಭೆ ನಡೆಸಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ಈಗಾಗಲೇ ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ನಿಲುವು ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆಗೆ ಸರ್ಕಾರ ಯಾವುದೇ ಕಾರಣಕ್ಕೂ ರಾಜೀ ಪ್ರಶ್ನೆ ಇಲ್ಲ. ಸರ್ಕಾರ ಇಂತಹ ಕ್ರಮಗಳನ್ನು ಸಹಿಸುವುದಿಲ್ಲ. ಬೆಳಗಾವಿಯಲ್ಲಿ ಸಂದಿಗ್ಧತೆಯನ್ನು ಉಂಟು ಮಾಡುವ ಕೆಲಸ ಯಾರಿಂದಲು ಆಗಬಾರದು ಎಂದು ಪರೋಕ್ಷವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ತಾಕೀತು ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಅನುಷ್ಠಾನಕ್ಕೆ ಬದ್ಧ: ಸಚಿವ ಸುಧಾಕರ್‌

ಈಗಾಗಲೇ ಈ ವಿಚಾರ ಸುಪ್ರೀಂ ಕೋರ್ಚ್‌ ನಲ್ಲಿ ವಿಚಾರಣೆ ಬಾಕಿ ಇದೆ. ಅದು ಅಲ್ಲಿಯೆ ತೀರ್ಮಾನ ಆಗಲಿದೆ. ಮಹಾರಾಷ್ಟ್ರದ ಸಚಿವರು ಮಾಡಿದ ರೀತಿಯಲ್ಲಿ ಕರ್ನಾಟಕದ ನಾವು ಆರು ಸಚಿವರು ಮಹಾರಾಷ್ಟ್ರಕ್ಕೆ ಹೋಗಿ ಸಭೆ ಮಾಡಿದರೆ ಆಗುತ್ತಾ ಎಂದು ಖಾರವಾಗಿ ಪ್ರಶ್ನಿಸಿದರು. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನೆರೆಯ ಜನರ ಭಾವನೆಗಳನ್ನು ಕೆದಕುವ ಕೆಲಸ ಮಾಡಬಾರದು. ಪ್ರತಿಯೊಬ್ಬರು ಕೂಡ ಭಾರತೀಯನು ಎಂಬ ಮನೋಭಾವನೆಯನ್ನು ಇಟ್ಟುಕೊಳ್ಳಬೇಕು. ಎರಡು ರಾಜ್ಯಗಳ ಸಂಬಂಧ ಚೆನ್ನಾಗಿರಬೇಕೆಂದರೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಅಭಿಪ್ರಾಯಪಟ್ಟರು.

ಎರಡು ವಾರಗಳ ಬಳಿಕ ನರ್ಸಿಂಗ್‌ ಪರೀಕ್ಷೆ: ನರ್ಸಿಂಗ್‌ ಕಾಲೇಜುಗಳಲ್ಲಿ ಪರೀಕ್ಷೆ ಅಕ್ರಮ ಪ್ರಕರಣ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಗೆ ಆದೇಶ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿದರು. ಭದ್ರಾವತಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವಾರಗಳ ನಂತರ ಪಾರದರ್ಶಕವಾಗಿ ಎಲ್ಲ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮತ್ತೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಕೇಂದ್ರಗಳನ್ನು ಸಿಸಿ ಕ್ಯಾಮೆರಾಗಳು ಇದ್ದರೆ ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

ರಮೇಶ್‌ ಜಾರಕಿಹೊಳಿ ಜೆಡಿಎಸ್‌ಗೆ ಸೇರ್ಪಡೆ ವಿಚಾರ ಸುಳ್ಳು. ಅವರೆಲ್ಲ ನಮ್ಮ ಜೊತೆ ಇದ್ದಾರೆ. ಪಕ್ಷವನ್ನು ಮತ್ತೆ ಆಡಳಿತಕ್ಕೆ ತರಬೇಕು ಎಂದು ತಂತ್ರವನ್ನು ರೂಪಿಸುತ್ತಿದ್ದಾರೆ. ಬಿಡದಿಯಲ್ಲಿ ಮಹಿಳಾ ವೈದ್ಯರು ಲಂಚ ಪಡೆದ ಪ್ರಕರಣ ವಿಚಾರ ಈ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.