ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶರಣಕುಮಾರ ಲಿಂಬಾಳೆ ಅವರು ಬೆಳಗಾವಿ ಗಡಿವಿವಾದದಲ್ಲಿ ಕರ್ನಾಟಕದ ಪರ ಒಲವು ತೋರಿದ್ದಾರೆ. ಬೆಳಗಾವಿ ಭಾರತದಲ್ಲೇ ಇದ್ದು, ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 ಬೆಳಗಾವಿ (ನ.27): ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದರೆ, ಬೆಳಗಾವಿ ಕರ್ನಾಟಕದಲ್ಲಿದೆ ಎಂದರೆ ಪಾಕಿಸ್ತಾನದಲ್ಲಿದೆಯೇ ಎಂಬ ಪ್ರಶ್ನೆ ಕೇಳುವ ಮೂಲಕ ಮರಾಠಿ ಸಾಹಿತ್ಯ ಸಮ್ಮೇಳನದ ನೂತನ ಅಧ್ಯಕ್ಷ ಶರಣಕುಮಾರ ಲಿಂಬಾಳೆ ಅವರು ಗಡಿವಿವಾದದಲ್ಲಿ ಕರ್ನಾಟಕದ ಪರ ಮಾತನಾಡಿದ್ದಾರೆ. ಅವರ ಹೇಳಿಕೆ ಇದೀಗ ಕನ್ನಡಿಗರ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಮರಾಠಿಗರು ವಿದೇಶದಲ್ಲೂ ಇದ್ದಾರೆ ಅವರೆಲ್ಲರನ್ನೂ ಕರೆತರುತ್ತೀರಾ?

ಬಿಬಿಸಿ ಮರಾಠಿಗೆ(BBC marathi) ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಿಂಬಾಳೆ, ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಇದ್ದಾರೆ ಎಂಬ ಕಾರಣಕ್ಕೆ ಆ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಬೇಡಿಕೆ ಮುಂದಿಡಲಾಗುತ್ತಿದೆ. ಆದರೆ, ಮರಾಠಿ ಭಾಷಿಕರು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ತಮಿಳುನಾಡು, ಕೇರಳ ಹಾಗೂ ಜಗತ್ತಿನ ಹಲವು ಭಾಗಗಳಲ್ಲಿದ್ದಾರೆ. ಹಾಗಾದರೆ ಅವರೆಲ್ಲರನ್ನೂ ಮಹಾರಾಷ್ಟ್ರಕ್ಕೆ ಕರೆತರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಭಾರತದಲ್ಲೇ ಇರೋದು, ಕನ್ನಡಿಗರ ಬಗ್ಗೆ ಪ್ರೀತಿ ಇರಲಿ

ಬೆಳಗಾವಿ ಭಾರತದಲ್ಲಿಯೇ ಇದೆ. ಇಲ್ಲಿನ ಕನ್ನಡಿಗರ ಬಗ್ಗೆಯೂ ಪ್ರೀತಿ ಮತ್ತು ಗೌರವ ಇರಬೇಕು. ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಕಲಿಯಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಬೆಳಗಾವಿ ಕರ್ನಾಟಕದ ಆಡಳಿತ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿ ಹಲವು ದಶಕಗಳಿಂದ ಮುಂದುವರಿದಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯೊಂದಿಗೆ ಈ ನೆಲಕ್ಕೆ ಅವಿನಾಭಾವ ಸಂಬಂಧವಿದೆ. ಬೆಳಗಾವಿಯ ಇತಿಹಾಸ, ಕನ್ನಡದ ಸಾಂಸ್ಕೃತಿಕ ನೆಲೆ ಮತ್ತು ಕರ್ನಾಟಕದ ಅಭಿವೃದ್ಧಿಯಲ್ಲಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಗಡಿ ವಿವಾದದ ರಾಜಕೀಯ ಚರ್ಚೆಗಳನ್ನು ಮುಂದಿಟ್ಟುಕೊಂಡು ಈ ವಾಸ್ತವವನ್ನು ಮರೆಮಾಚಲು ಸಾಧ್ಯವಿಲ್ಲ ಎಂದಿದ್ದಾರೆ.