ಮಹಾದಾಯಿ ತೀರ್ಪು ತಡೆಗೆ ಗೋವಾ ಕ್ಯಾತೆ..ಏನಿದು ಕತೆ?
ಇನ್ನೇನು ಮಹದಾಯಿ ವ್ಯಾಜ್ಯದ ಅಂತಿಮ ತೀರ್ಪು ಹೊರ ಬರುತ್ತದೆ ಎಂಬ ಆಶಾ ಭಾವನೆ ಮೂಡಿರುವಾಗಲೇ ಗೋವಾ ಸರಕಾರ ಮತ್ತೆ ಹೊಸ ಕ್ಯಾತೆ ತೆಗೆದಿದ್ದು ಕರ್ನಾಟಕದ ವಿರುದ್ದ ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಅಂತಿಮ ತೀರ್ಪು ತಡೆಯುವ ಹುನ್ನಾರ ನಡೆಸಿದ್ದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.
ಬೆಳಗಾವಿ[ಜು.25] ಆಗಸ್ಟ್ ಎರಡನೇ ವಾರದಲ್ಲಿ ಮಹದಾಯಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದ್ದು ಗೋವಾ ಸರಕಾರ ಶತಾಯ-ಗತಾಯ ತೀರ್ಪು ತಡೆಹಿಡಿಯುವ ಹುನ್ನಾರ ನಡೆಸಿದೆ. ಕರ್ನಾಟಕ ಸರಕಾರ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿದೆ ಎಂದು ಆರೋಪಿಸಿ ನ್ಯಾಯಾಧಿಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಲು ಮುಂದಾಗಿದೆ. ಸೋಮವಾರ ಗೋವಾದ ಅಧಿಕಾರಿಗಳ ತಂಡ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕರ್ನಾಟಕ ಅಕ್ರಮ ಕಾಮಗಾರಿ ಮೂಲಕ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿರುವುದು ಕಂಡು ಬಂದಿದ್ದು ಅದಕ್ಕಾಗಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದಿದೆ.
ಕರ್ನಾಟಕ ಸರ್ಕಾರ ನ್ಯಾಯಾಧಿಕರಣದ ವಿರುದ್ಧ ಎಂದೂ ಹೋಗಿಲ್ಲ ಇಷ್ಟಾದರೂ ಗೋವಾ ಸರಕಾರ ನಿರಾಧಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವುದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ. ಅಷ್ಟೇ ಅಲ್ಲದೇ ಬೆಳಗಾವಿ ವ್ಯಾಪ್ತಿಯ ಕಣಕುಂಬಿ ವಿವಾದಿತ ಪ್ರದೇಶಕ್ಕೆ ಗೋವಾ ಸರ್ಕಾರದ ಅಧಿಕಾರಿಗಳು ನಾಲ್ಕೈದು ವಾಹನಗಳಲ್ಲಿ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ರು ಬೆಳಗಾವಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತುಕೊಂಡಿತ್ತೆ ಎಂಬ ಪ್ರಶ್ನೆಯೂ ೆದುರಾಗಿದೆ.
ಮಹದಾಯಿ ತೀರ್ಪು ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ರೈತ ಸಮುದಾಯಕ್ಕೆ ಗೋವಾ ಸರ್ಕಾರದ ಈ ನಡೆ ಬೇಸರ ಮೂಡಿಸಿದ್ದು ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.