ಹುಬ್ಬಳ್ಳಿ(ಮಾ.01): ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂತು; ಗೆಜೆಟ್‌ ನೋಟಿಫಿಕೇಶನ್‌ ಆಯ್ತು; ಇನ್ನೇನಿದ್ದರೂ ಕಾಮಗಾರಿ ಕೈಗೆತ್ತಿಕೊಳ್ಳಬೇಕಷ್ಟೇ. ಇನ್ನು ಮೇಲಾದರೂ ನಮ್ಮ ಮೇಲಿನ ಕೇಸ್‌ಗಳನ್ನು ತೆಗೆದು ಹಾಕಿ...!

ಇದು ಮಹದಾಯಿಗಾಗಿ ಹೋರಾಟ ನಡೆಸಿ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಕೇಸ್‌ಗಳಿಂದಾಗಿ ಕೋರ್ಟ್‌ಗೆ ಅಲೆದಾಡುತ್ತಿರುವ ಹೋರಾಟಗಾರರ ಬೇಡಿಕೆಯಿದು. ಹಾಗೆ, ನೋಡಿದರೆ ಮಹದಾಯಿ ಹೋರಾಟಗಾರರ ಮೇಲೆ ಸಾಕಷ್ಟು ಕೇಸ್‌ಗಳು ದಾಖಲಾಗಿದ್ದವು. ಅವುಗಳಲ್ಲಿ ಬಹುತೇಕ ಕೇಸ್‌ಗಳನ್ನು ಸರ್ಕಾರ ಹಿಂಪಡೆದಿದೆ. ಆದರೂ ಇನ್ನೂ ಕೆಲ ಹೋರಾಟಗಾರರ ಮೇಲೆ ಕೇಸ್‌ಗಳು ಹಾಗೆ ಉಳಿದಿವೆ. ಅವುಗಳನ್ನು ತೆಗೆದುಹಾಕಿ ಎಂಬ ಬೇಡಿಕೆ ಹೋರಾಟಗಾರರದ್ದು.

ರಾಜ್ಯದೆಲ್ಲೆಡೆ ಮಹದಾಯಿ ರೈತರಿಂದ ಸಂಭ್ರಮಾಚರಣೆ

ಹೌದು, ಮಹದಾಯಿಗಾಗಿ ಉತ್ತರ ಕರ್ನಾಟಕದಲ್ಲಿ ನಡೆದ ಹೋರಾಟ ಅಷ್ಟಿಷ್ಟಲ್ಲ. ಹಾಗೆ ನೋಡಿದರೆ ದಶಕಗಳಿಂದಲೂ ಈ ಹೋರಾಟ ನಡೆಯುತ್ತಿದ್ದರೂ ಕಳೆದ 2015ರಿಂದ ತೀವ್ರತೆ ಪಡೆಯಿತು. 2015ರಿಂದ ಈ ವರೆಗೆ ಹತ್ತಾರು ಬಾರಿ ಬಂದ್‌, ರಸ್ತೆ ತಡೆ, ಉಪವಾಸ, ಧರಣಿ, ಕಚೇರಿಗಳಿಗೆ ಮುತ್ತಿಗೆ ಹೀಗೆ ಎಲ್ಲ ಬಗೆಯ ಪ್ರತಿಭಟನೆಗಳು ನಡೆದಿದ್ದುಂಟು. ನರಗುಂದ ಹಾಗೂ ನವಲಗುಂದಗಳಲ್ಲಿ ಹೋರಾಟಕ್ಕಾಗಿ ಪ್ರತ್ಯೇಕ ಕಾಯಂ ವೇದಿಕೆಗಳು ಸಿದ್ಧಗೊಂಡಿದೆ. 1688 ದಿನಗಳಿಂದ ಅಲ್ಲಿ ಧರಣಿ ನಿರಂತರ ನಡೆಯುತ್ತಲೇ ಇದೆ. ಇವೆಲ್ಲವುಗಳ ಮಧ್ಯೆ ಈ ವರೆಗೆ 5 ಬಾರಿ ರಾಜ್ಯ ಬಂದ್‌ ಮಾಡಿದ್ದರೆ, 70ಕ್ಕೂ ಹೆಚ್ಚು ಬಾರಿ ನರಗುಂದ, ನವಲಗುಂದ, ಸವದತ್ತಿ, ಬೈಲಹೊಂಗಲ ಸೇರಿದಂತೆ ಹಲವೆಡೆ ಬಂದ್‌ಗಳನ್ನು ಆಚರಿಸಲಾಗಿದೆ. ಹೀಗೆ ಪ್ರತಿಭಟನೆ ನಡೆಸಿದ ನೂರಾರು ಜನರ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಹಿಂದೆ ಪಡೆದರು!

ಹೀಗೆ ದಾಖಲಾದ ಪ್ರಕರಣಗಳು ಸಾಕಷ್ಟುಪ್ರಕರಣಗಳನ್ನು ಸರ್ಕಾರ ವಾಪಸ್‌ ಪಡೆದಿದೆ. ಸಚಿವ ಸಂಪುಟ ಸಭೆಯಲ್ಲೇ ನಿರ್ಧಾರ ಕೈಗೊಂಡು ಹಿಂಪಡೆಯಲಾಗಿದೆ. ಆದರೂ ಕೆಲವೊಂದು ಕೇಸ್‌ಗಳು ಮಾತ್ರ ಹಾಗೆ ಉಳಿದಿವೆ. 2016ರಲ್ಲಿ ನ್ಯಾಯಾಧಿಕರಣ ನೀಡಿದ ಮಧ್ಯಂತರ ತೀರ್ಪಿನ ವೇಳೆ ನಡೆದ ಗಲಾಟೆಯಲ್ಲಿ ಹೀಗೆ ಉಳಿದಿರುವ ಕೇಸ್‌ಗಳ ಪೈಕಿ ನವಲಗುಂದ ತಾಲೂಕಿನ ಯಮನೂರಲ್ಲಿ 178 ಜನರ ಮೇಲೆ ಸುಮಾರು 42ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿತ್ತು. ಸರ್ಕಾರ ಎಲ್ಲರ ಮೇಲಿನ ಕೇಸ್‌ಗಳನ್ನು ಹಿಂಪಡೆದಿದೆ.

ಬಾಕಿಯಿರುವುದೆಷ್ಟು?

ಇನ್ನೂ ಇದೇ ವೇಳೆ ಟೆಲಿಫೋನ್‌ ಎಕ್ಸ್‌ಚೇಂಜ್‌, ಪಿಡಬ್ಲುಡಿ ಕಚೇರಿ, ಕೋರ್ಟ್‌ ಹಾಗೂ ಮುನ್ಸಿಪಾಲಿಟಿ ಮೇಲೆ ದಾಳಿಗೆ ಸಂಬಂಧಪಟ್ಟಂತೆ 4 ಕೇಸ್‌ಗಳು ಮಾತ್ರ ಹಾಗೆ ಇವೆ. ಸುಮಾರು 50 ಜನರ ಮೇಲೆ ಈ ನಾಲ್ಕು ಕೇಸ್‌ಗಳಿವೆ ಎಂದು ಮೂಲಗಳು ತಿಳಿಸುತ್ತವೆ.

BSY ಮಹದಾಯಿಗಾಗಿ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ: ಪ್ರಹ್ಲಾದ ಜೋಶಿ

ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ 3 ಕೇಸ್‌ ಹಾಗೂ ಮುರಗೋಡ ಠಾಣಾ ವ್ಯಾಪ್ತಿಯ ಬೆನಕಟ್ಟಿಗ್ರಾಮದಲ್ಲಿ 1 ಕೇಸ್‌ ದಾಖಲಾಗಿತ್ತು. ಮುನವಳ್ಳಿಯಲ್ಲಿನ 3 ಕೇಸ್‌ಗಳನ್ನು ಸರ್ಕಾರ ಹಿಂಪಡೆದಿದೆ. ಆದರೆ ಬೆನಕಟ್ಟಿಗ್ರಾಮದಲ್ಲಿ 12 ಜನರ ಮೇಲೆ 1 ಕೇಸ್‌ ದಾಖಲಾಗಿತ್ತು. ಅದನ್ನು ಹಿಂಪಡೆದಿಲ್ಲ. ಹೀಗಾಗಿ, ಬೆನಕಟ್ಟಿಗ್ರಾಮದ 12 ಜನರು ಈಗಲೂ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದ ಕನ್ನಡಪರ ಸಂಘಟನೆಗಳ 8 ಜನರ ಮೇಲೆ ಕೇಸ್‌ ದಾಖಲಾಗಿದೆ. ಇದೂ 2018ರಲ್ಲಿ ಹಾಕಿದ್ದ ಕೇಸ್‌. ಅದನ್ನೂ ಈ ವರೆಗೆ ಹಿಂಪಡೆದಿಲ್ಲ. ಈಗಲೂ ಕೋರ್ಟ್‌ಗೆ ಅಲೆದಾಡುವುದು ತಪ್ಪುತ್ತಿಲ್ಲ.

ಹಿಂಪಡೆಯಿರಿ:

ದಾಖಲಾಗಿದ್ದ ಶೇ. 95ರಷ್ಟುಕೇಸ್‌ಗಳನ್ನೆಲ್ಲ ಸರ್ಕಾರ ಹಿಂಪಡೆದಿದೆ. ಇನ್ನುಳಿದ ಶೇ. 5ರಷ್ಟಿರುವ ಕೇಸ್‌ಗಳು ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಹಿಂಪಡೆದಿಲ್ಲ. ಅವುಗಳನ್ನು ಹಿಂಪಡೆಯಬೇಕೆಂಬ ಬೇಡಿಕೆ ಹೋರಾಟಗಾರರದ್ದು. ಇದೀಗ ಬಿಜೆಪಿ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಹಿಂಪಡೆಯಬೇಕು ಎಂದು ಆಗ್ರಹಿಸುತ್ತಾರೆ.

ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರ ಮೇಲೆ ದಾಖಲಿಸಿದ್ದ ಶೇ. 95ರಷ್ಟುಕೇಸ್‌ಗಳನ್ನು ಹಿಂಪಡೆದಿದೆ. ಇನ್ನು ಶೇ.5ರಷ್ಟು ಮಾತ್ರ ಬಾಕಿಯುಳಿದಿವೆ ಎಂದು ವಕೀಲ ವಿ.ಬಿ.ಪಾಟೀಲ ಹೇಳಿದ್ದಾರೆ. 

2018ರಲ್ಲಿ ಹೋರಾಟ ನಡೆಸಿದ್ದಕ್ಕೆ ನಮ್ಮ ಮೇಲೆ ಕೇಸ್‌ ದಾಖಲಾಗಿದೆ. ನಾವು ಸಾರ್ವಜನಿಕರಿಗಾಗಿ ಹೋರಾಟ ಮಾಡಿದ್ದೇವೆ. ನಮ್ಮ ಮೇಲಿನ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ ತಿಳಿಸಿದ್ದಾರೆ.