Asianet Suvarna News Asianet Suvarna News

ಕೆ.ಆರ್‌.ಪೇಟೆಯಲ್ಲಿ ಅದ್ಧೂರಿ ಮಹಾಕುಂಭ: ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ

ಮಹಾಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ 

Maha Kumbha Mela Starts on October 14th at KR Pete in Mandya grg
Author
First Published Oct 15, 2022, 8:10 AM IST

ಮಂಡ್ಯ ಮಂಜುನಾಥ

(ತ್ರಿವೇಣಿ ಸಂಗಮ) ಮಂಡ್ಯ(ಅ.15):  ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಮಹಾಕುಂಭಮೇಳಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕಾವೇರಿ, ಹೇಮಾವತಿ, ಲಕ್ಷ್ಮಮಣ ತೀರ್ಥ ನದಿಗಳ ಸಂಗಮ ಕ್ಷೇತ್ರವೆನಿಸಿರುವ ತ್ರಿವೇಣಿ ಸಂಗಮದಲ್ಲಿ ಎರಡನೇ ಮಹಾಕುಂಭ ಮೇಳ ಮೇಳೈಸಿದ್ದು, ರಾಜ್ಯದ ವಿವಿಧ ಮಠಗಳಿಂದ ಆಗಮಿಸಿದ ಮಠಾಧೀಶರು, ಸಾಧು-ಸಂತರು, ರಾಜಕೀಯ ಪಕ್ಷಗಳ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಹಸ್ರಾರು ಭಕ್ತರು ಕುಂಭಮೇಳದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಹಾಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಬೆಳಗ್ಗೆ 11.10ಕ್ಕೆ ತ್ರಿವೇಣಿ ಸಂಗಮಕ್ಕೆ ಆಗಮಿಸಿದ ವೀರೇಂದ್ರ ಹೆಗ್ಗಡೆ, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಶಿಕಲಾ ಜೊಲ್ಲೆ, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ, ತ್ರಿವೇಣಿ ಸಂಗಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಅವರು ಆಗಮಿಸಿದರು.

Mandya: ಮಿತಿಮೀರಿದ ನೀರಿನ ಬಳಕೆ: ಪ್ರಕೃತಿ ಎಚ್ಚರಿಕೆ ಗಂಟೆ

ದೇಗುಲದ ಪಕ್ಕದಲ್ಲಿ ಗುರುವಾರವೇ ವಿಶೇಷ ಪೂಜೆ ನೆರವೇರಿಸಿ ಪ್ರತಿಷ್ಠಾಪಿಸಲಾಗಿದ್ದ 108 ಕುಂಭ ಕಳಶಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ, ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ನಂತರ, ದೇಗುಲದ ಮೇಲೆ ನಿರ್ಮಿಸಿದ್ದ ಗೋಪುರದಲ್ಲಿ ಪ್ರತಿಷ್ಠಾಪಿಸಿದ್ದ ಗೋಪುರ ಕಳಶಕ್ಕೆ ಪೂಜೆ ಮಾಡಿ, ಮಹಾ ಕುಂಭಾಭಿಷೇಕ ನೆರವೇರಿಸಲಾಯಿತು.

ಬಳಿಕ, 11.47ಕ್ಕೆ ದೇಗುಲ ಪ್ರವೇಶ ಕಾರ್ಯ ನಡೆಯಿತು. ಅಲ್ಲಿ ಮಲೆಮಹದೇಶ್ವರಸ್ವಾಮಿಗೆ ಪೂಜೆ ನೆರವೇರಿಸಿ, ಕಳಾಕರ್ಷಣೆ ತುಂಬಲಾಯಿತು. ನಂತರ, ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು. ಬಳಿಕ, ವೀರೇಂದ್ರ ಹೆಗ್ಗಡೆ ಹಾಗೂ ಸಾಧು ಸಂತರು, ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸಿದರು. ಈ ವೇಳೆ, ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಕೆಲವರು ತೀರ್ಥಪ್ರೋಕ್ಷಣೆ ಮಾಡಿಕೊಂಡು, ದೇವರ ದರ್ಶನ ಪಡೆದರು. ಮೇಳದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಜನಜಾತ್ರೆಯೇ ನೆರೆದಿತ್ತು.
 

Follow Us:
Download App:
  • android
  • ios