Madras Eye; ಉಡುಪಿಯಲ್ಲಿ ಹೆಚ್ಚಿದ ಕೆಂಗಣ್ಣು ಸಾಂಕ್ರಾಮಿಕ ರೋಗ, ವೈದ್ಯರ ಸಲಹೆ ಪಡೆಯಲು ಸೂಚನೆ
ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಪ್ರಕರಣ ಹೆಚ್ಚಳವಾಗುತ್ತಿದ್ದು ಬಾಧಿತರು ವೈದ್ಯರ ಸಲಹೆಯಂತೆ ಸೂಕ್ತ ಔಷಧ ತೆಗೆದುಕೊಳ್ಳಲು ಸಂಬಂಧಿಸಿದ ಇಲಾಖೆ ಸಲಹೆ ನೀಡಿದೆ.
ಉಡುಪಿ (ಡಿ.12): ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಕೆಂಗಣ್ಣು (ಕೆಂಪು ಕಣ್ಣು) ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಪ್ರಕರಣ ಹೆಚ್ಚಳವಾಗುತ್ತಿದ್ದು ಬಾಧಿತರು ವೈದ್ಯರ ಸಲಹೆಯಂತೆ ಸೂಕ್ತ ಔಷಧ ತೆಗೆದುಕೊಳ್ಳಲು ಸಂಬಂಧಿಸಿದ ಇಲಾಖೆ ಸಲಹೆ ನೀಡಿದೆ.
ವೈರಾಣು ಅಥವಾ ಬ್ಯಾಕ್ಟೀರಿಯಾ ಕಾರಣದಿಂದ ಹಬ್ಬುವ ಈ ಕೆಂಗಣ್ಣಿನಿಂದ ಕಣ್ಣಿನ ಬಿಳಿಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತ ಜೊತೆಗೆ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವ ಲಕ್ಷಣ ಕಂಡುಬರುತ್ತದೆ. ಈ ಸಾಂಕ್ರಾಮಿಕ ರೋಗವು ಬಹುಬೇಗನೆ ಹರಡುತ್ತದೆ. ಉಡುಪಿ ತಾಲೂಕಿನಲ್ಲಿ ಕಳೆದ ನವೆಂಬರ್‌ನಲ್ಲಿ 60, ಡಿಸೆಂಬರ್‌ನಲ್ಲಿ ಈವರೆಗೆ 15 ಪ್ರಕರಣ ಬೆಳಕಿಗೆ ಬಂದಿದೆ. ಕುಂದಾಪುರ ತಾಲೂಕಿನಲ್ಲಿ ನವೆಂಬರ್‌ನಲ್ಲಿ 80, ಡಿಸೆಂಬರ್‌ನಲ್ಲಿ 117, ಕಾರ್ಕಳದಲ್ಲಿ ನವೆಂಬರ್‌ಗೆ 124, ಡಿಸೆಂಬರ್‌ನಲ್ಲಿ 395 ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದೆ.
ಎಲ್ಲೆಡೆ ಹರಡುತ್ತಿರುವ ಮದ್ರಾಸ್ ಐ, ಹುಷಾರಾಗಿದ್ದು ಆರೋಗ್ಯ ಕಾಪಾಡಿಕೊಳ್ಳಿ
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲೂ ಕೆಂಗಣ್ಣು ಪ್ರಕರಣ ಏರಿಕೆ ಕಂಡುಬರುತ್ತಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಂಗಣ್ಣಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಧಿತರು ವೈದ್ಯರ ಸಲಹೆಯಂತೆ ಸೂಕ್ತ ಔಷಧ ಉತ್ತಮ. ಸಾಮಾನ್ಯವಾಗಿ ವಾರದೊಳಗೆ ಕೆಂಗಣ್ಣು ಗುಣಮುಖವಾಗುತ್ತದೆ. ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಕನ್ನಡಕ ಧರಿಸುವುದು ಉತ್ತಮ. ಕೈ, ಮುಖವನ್ನು ಚೆನ್ನಾಗಿ ತೊಳೆದುಕೊಂಡು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲೆ ಸರ್ವೇಕ್ಷಣ ಅಧಿಕಾರಿ ಡಾ. ನಾಗರತ್ನ ಹೇಳಿಕೆ ನೀಡಿದ್ದಾರೆ.
ಸಾಂಕ್ರಾಮಿಕ ಕೆಂಗಣ್ಣು ಸಮಸ್ಯೆ: 5 ದಿನ ಶಾಲೆಗೆ ಬರದಂತೆ ದಕ್ಷಿಣ ಕನ್ನಡ ಶಿಕ್ಷಣ ಇಲಾಖೆ ಸೂಚನೆ
ಕೆಂಗಣ್ಣು ಭಯ ಬೇಡ: ಕೆಂಗಣ್ಣು ಪ್ರತಿ ವರ್ಷ ಅಲ್ಲಲ್ಲಿ ಕಾಣಿಸುತ್ತದೆ. ಅದು ವೈರಸ್ ರೋಗ. ಕಣ್ಣಿನ ಡ್ರಾಫ್ಸ್ ಮೂಲಕ ಕೆಂಗಣ್ಣು ಗುಣಪಡಿಸಬಹುದು. ಕೆಂಗಣ್ಣಿಗೆ ಗುರಿಯಾದವರು ಕಣ್ಣುಜ್ಜಬಾರದು. ವೈದ್ಯರ ಸಲಹೆ ಪಡೆದು ಕಣ್ಣಿಗೆ ಡ್ರಾಫ್ಸ್ ಹಾಕಿಸಿಕೊಳ್ಳಬೇಕು. ನಾಲ್ಕೈದು ದಿನಗಳಲ್ಲಿ ಕಡಿಮೆಯಾಗುತ್ತದೆ. ಇದು ಹರಡದಂತೆ ಜಾಗ್ರತೆ ವಹಿಸಬೇಕಾದ್ದು ಮುಖ್ಯ. ಕಣ್ಣಿಗೆ ಗ್ಲಾಸ್ ಧರಿಸುವುದು ಅಥವಾ ಕೈ, ಮುಖ ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳುವುದು ಅತ್ಯಗತ್ಯ. ಕೆಂಗಣ್ಣಿಗೆ ಭೀತಿ ಪಡಬೇಕಾಗಿಲ್ಲ.