ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯನೆಂದು ನಟಿಸಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ. ವಿದ್ಯಾರ್ಥಿಗಳ ತರಗತಿ ಕೋಣೆ, ಹೆರಿಗೆ ವಾರ್ಡ್ ಸೇರಿದಂತೆ ಹಲವು ಕಡೆ ಓಡಾಡಿ, ಸಿಬ್ಬಂದಿಗೆ ತೊಂದರೆ ನೀಡಿದ ಘಟನೆ ನಡೆದಿದೆ. ನಂತರ ಆತನನ್ನು ಮಾನಸಿಕ ಅಸ್ವಸ್ಥ ಎಂದು ಗುರುತಿಸಲಾಗಿದೆ.

ಬೆಳಗಾವಿ (ಫೆ.02): ಬೆಳಗಾವಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಬಿಮ್ಸ್ ಆಸ್ಪತ್ರೆಯಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು ಎಂಬಿಬಿಎಸ್ ವಿದ್ಯಾರ್ಥಿಗಳ ತರಗತಿ ಕೋಣೆಗಳು, ಹೆರಿಗೆ ವಾರ್ಡ್, ಎಮರ್ಜೆನ್ಸಿ ವಾರ್ಡ, ನರ್ಸಿಂಗ್ ಸಿಬ್ಬಂದಿಯ ಕೋಣೆಯೊಳಗೆ ನುಗ್ಗಿದ ಹುಚ್ಚನೊಬ್ಬ ಆಸ್ಪತ್ರೆ ತುಂಬಾ ಓಡಾಡಿ ಹುಚ್ಚಾಟ ಮೆರೆದಿದ್ದಾನೆ. ಆದರೆ, ಯಾರಿಗೂ ತಾನು ವೈದ್ಯನೆಂದು ಇಂಜೆಕ್ಷನ್ ಮಾಡುವುದಾಗಲೀ, ಬೇರೆ ಯಾವುದೇ ಚಿಕಿತ್ಸೆ ನೀಡದಿರುವ ಕಾರಣ ರೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ತಾನು ಪಿಜಿ ವಿದ್ಯಾರ್ಥಿ ಎಂದು ಹೇಳಿ ಯುವಕನ ಹುಚ್ಚಾಟ ಮಾಡಿದ್ದಾನೆ. ವೈದ್ಯಕೀಯ ವಿದ್ಯಾರ್ಥಿಯ ವೇಷ ಧರಿಸಿಕೊಂಡು ಬೀಮ್ಸ್ ಆಸ್ಪತ್ರೆಯ ಎಲ್ಲ ಕಡೆಯೂ ಓಟಾಟ ಮಾಡಿದ್ದಾನೆ. ಎಂಬಿಬಿಎಸ್ ವೈದ್ಯಕೀಯ ವಿದ್ಯಾರ್ಥಿಗಳ ತರಗತಿ ಕೋಣೆ, ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ, ನರ್ಸಿಂಗ್ ಸ್ಟಾಪ್ ಕೋಣೆಯಲ್ಲಿ ಓಡಾಡಿದ್ದಾನೆ. ನಂತರ, ವಿದ್ಯಾರ್ಥಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವರ್ತನೆಗೆ ಬೇಸತ್ತು ನರ್ಸಿಂಗ್ ಸಿಬ್ಬಂದಿ ಬಿಮ್ಸ್ ನಿರ್ದೇಶಕರಿಗೆ ದೂರು ಕೊಟ್ಟಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸೂರ್ಯವಂಶ ಸಿನಿಮಾದಲ್ಲಿ ದೊಡ್ಡಣ್ಣ ಹೇಳಿದ ಮಾತು ನಿಜವಾಗಿಸಲು ಕಾಲೇಜಿಗೆ ಬಂದ ಎಮ್ಮೆ!

ಆಗ ಯುವಕನನ್ನು ವಶಕ್ಕೆ ಪಡೆದ ಆಸ್ಪತ್ರೆ ಸಿಬ್ಬಂದಿ ಬಿಮ್ಸ್ ಆಡಳಿತ ಮಂಡಳಿ ವಶಕ್ಕೆ ಒಪ್ಪಿಸಿದ್ದಾರೆ. ಆಗ ಆತನನ್ನು ವಿಚಾರಣೆ ಮಾಡಿದಾಗ ಈತ ಕಾಲೇಜು ವಿದ್ಯಾರ್ಥಿಯೇ ಅಲ್ಲ. ಪಿಜಿ ವಿದ್ಯಾರ್ಥಿ ಎಂದು ಹೇಳಿಕೊಂಡು ಬಂದಿರುವ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಪಿಜಿ ವಿದ್ಯಾರ್ಥಿ ಎಂದು ಹುಚ್ಚಾಟ ಮೆರೆದ ಯುವಕನನ್ನು ಮಹಾರಾಷ್ಟ್ರ ಮೂಲದ ನವಲು ಪಾಟೀಲ್ (28) ಎಂದು ಗುರುತಿಸಲಾಗಿದೆ. ಬೀಮ್ಸ್ ನಿರ್ದೇಶಕ ಡಾ. ಅಶೋಕಕುಮಾರ್ ಶೆಟ್ಟಿ ಅವರು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದಾರೆ. ಈತ ಹೇಳಿದ್ದು ನಿಜವೇ ಎಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾನಸಿಕ ಅಸ್ವಸ್ಥ ಎಂಬುದು ಪತ್ತೆಯಾಗಿದೆ.