ಹುಬ್ಬಳ್ಳಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
* ಬಂಗಾರಪ್ಪ ಸಮುದಾಯ ಕಂಡ ಅತ್ಯಂತ ಮುತ್ಸದ್ದಿ ನಾಯಕ
* ಯಡಿಯೂರಪ್ಪನವರ ರಾಜಕೀಯ ಕೊನೆಗಾಲ
* ಬಂಗಾರಪ್ಪನವರ ವಾರಸುದಾರರಾಗಿ ಮಧು ಬಂಗಾರಪ್ಪ ಬೆಳೆಯಬೇಕು
ಹುಬ್ಬಳ್ಳಿ(ಜು.30): ಮಾಜಿ ಸಿಎಂ ಎಸ್. ಬಂಗಾರಪ್ಪನವರು- ಇಂದಿರಾಗಾಂಧಿ, ರಾಜೀವ್ ಗಾಂಧಿ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಆ ಸಂಬಂಧವನ್ನು ಅವರ ಪುತ್ರ ಮಧು ಬಂಗಾರಪ್ಪ ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಂಗಾರಪ್ಪನವರ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ಯಾವತ್ತೂ ಮರೆಯುವುದಿಲ್ಲ. ದಿನ ದಲಿತರ, ಬಡವರ ಪರ ಅವರಗಿದ್ದ ಕಾಳಜಿ ಯಾವತ್ತೂ ಮರೆಯಲು ಸಾದ್ಯವಿಲ್ಲ. ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದೊಂದಿಗೆ ಕಡಿದುಕೊಂಡಿದ್ದ ಸಂಪರ್ಕವನ್ನು ಮಧು ಬಂಗಾರಪ್ಪ ಸೇತುವೆಯಾಗಿ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಮಾಡಿ ಸೇರ್ಪಡೆ ಆಗುವ ಆಸೆ ಇತ್ತು. ಆದರೆ ಕೋವಿಡ್ ಕಾರಣಕ್ಕಾಗಿ ಇದು ಸಾಧ್ಯವಾಗಲಿಲ್ಲ. ಇಂದು ಹುಬ್ಬಳ್ಳಿಯಲ್ಲಿ ಇದು ಸಾಧ್ಯವಾಗಿದೆ ಅಂತ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಬಣ ರಾಜಕೀಯ : ಬದಲಾವಣೆಗೆ ಉಸ್ತುವಾರಿ ಕೋರಿಕೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಧು ಬಂಗಾರಪ್ಪ ಶಿವಮೊಗ್ಗದಲ್ಲೇ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಬೇಕಿತ್ತು. ಕೋವಿಡ್ ಇದ್ದ ಕಾರಣ ಅದು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಶಿವಮೊಗ್ಗ ಜಿಲ್ಲೆಗೆ ರಾಹುಲ್ ಗಾಂಧಿ ಸೇರಿದಂತೆ ಕೇಂದ್ರ ಕೈ ನಾಯಕರನ್ನ ಕರೆಸಿ ಬೃಹತ್ ಸಭೆ ಮಾಡಲಾಗುವುದು. ಅಂದು ರಾಜ್ಯದ ಜನವೇ ಶಿವಮೊಗ್ಗ ಜಿಲ್ಲೆಗೆ ಬರಬೇಕು, ಅದು ಪ್ರಚಾರ ಸಭೆಯೂ ಆಗಲಿದೆ. ದಿ. ಬಂಗಾರಪ್ಪ ಜಾತಿ ನಾಯಕರಾಗಿರಲಿಲ್ಲ, ಸಮುದಾಯದ ನಾಯಕರಾಗಿದ್ದರು. ಎಸ್. ಬಂಗಾರಪ್ಪ ಸಮುದಾಯ ಕಂಡ ಅತ್ಯಂತ ಮುತ್ಸದ್ದಿ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
2004 ರಲ್ಲಿ ಬಿಜೆಪಿಗೆ 79 ಸ್ಥಾನ ಬಂದಿದ್ದು ಬಂಗಾರಪ್ಪ ಅವರಿಂದ. ಸಮಾಜವಾದಿ ಸಿದ್ಧಾಂತದ ಬಗ್ಗೆ ನಂಬಿಕೆ ಹೊಂದಿದ್ದ ಬಂಗಾರಪ್ಪನವರನ್ನ ಬಿಜೆಪಿ ಅವಮಾನ ಮಾಡಿತ್ತು. ಆ ಪರಂಪರೆಯನ್ನ ಮಧು ಬಂಗಾರಪ್ಪ ಮುಂದುವರೆಸಬೇಕು. ಮಧು ಬಂಗಾರಪ್ಪ ಪಕ್ಷ ಸೇರ್ಪಡೆ ಕಾಲ ಹೇಗಿದೆ ಅಂದ್ರೆ, ಯಡಿಯೂರಪ್ಪನವರ ಅಂತ್ಯಕಾಲದಲ್ಲಿ ನೀವು ಪಕ್ಷ ಸೇರ್ಪಡೆಯಾಗುತ್ತಿದ್ದೀರಿ, ಈ ಸಂದರ್ಭವನ್ನು ನೀವು ಸಮರ್ಥವಾಗಿ ಬಳಸಿಕೊಳ್ಳಬೇಕು. ಯಡಿಯೂರಪ್ಪನವರ ರಾಜಕೀಯ ಕೊನೆಗಾಲವಾಗಿದೆ. ಬಂಗಾರಪ್ಪನವರ ವಾರಸುದಾರರಾಗಿ ಮಧು ಬಂಗಾರಪ್ಪ ಬೆಳೆಯಬೇಕು ಎಂದು ಆಶಿಸಿದ್ದಾರೆ.