ಬೆಂಗಳೂರು-ಮೈಸೂರು ಹೈವೇ: ಹೆದ್ದಾರಿ ಪ್ರಾಧಿಕಾರ ವಿರುದ್ಧ ಕ್ರಿಮಿನಲ್ ಕೇಸು
ಪುರಸಭೆಗೆ ಹಾನಿಯಾಗಿರುವ ಮೂಲ ಸೌಲಭ್ಯಗಳ ವಸ್ತುಗಳ ಆರ್ಥಿಕ ನಷ್ಟ ವಸೂಲಿಗಾಗಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಪುರಸಭೆಯ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ
ಮದ್ದೂರು(ಸೆ.10): ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿ ಪುರಸಭೆಗೆ ಹಾನಿಯಾಗಿರುವ ಮೂಲ ಸೌಲಭ್ಯಗಳ ವಸ್ತುಗಳ ಆರ್ಥಿಕ ನಷ್ಟ ವಸೂಲಿಗಾಗಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶುಕ್ರವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಎಸ್.ಸುರೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ನಾಗರಿಕರಿಗೆ ಮೂಲ ಸೌಲಭ್ಯಗಳ ಕಲ್ಪಿಸುವ ಕುಡಿವ ನೀರು, ಒಳಚರಂಡಿ, ಚರಂಡಿ ವ್ಯವಸ್ಥೆ, ಪೈಪ್‌ಲೈನ್ ಇನ್ನಿತರ ವಸ್ತುಗಳು ಹಾನಿಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಲ್ಲಿ ಯೋಜನೆಯಂತೆ ನಡೆಯುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೇಕಾ ಬಿಟ್ಟಿಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಪುರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮನವಿಗೂ ಸ್ಪಂದಿಸದೆ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಹಲವಾರು ಸಮಸ್ಯೆಗಳು ಉದ್ಬವವಾಗಿ ಮೂಲ ಸೌಲಭ್ಯಗಳ ಕಲ್ಪಿಸುವ ವಸ್ತುಗಳು ಹಾನಿಯಾಗಿದೆ ಎಂದು ಸದಸ್ಯ ಎಂ.ಐ.ಪ್ರವೀಣ್ ಆರೋಪಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸರಿ ಎನ್ನುವವರು ಬಂದು ನೋಡಲಿ: ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಕಿಡಿ
ಕಾಮಗಾರಿಯಿಂದಾಗಿ ಪುರಸಭೆ ನಾಗರಿಕರಿಗೆ ಮೂಲ ಸೌಲಭ್ಯಗಳ ಕಲ್ಪಿಸುವ ವಸ್ತುಗಳು ನಾಶವಾಗಿ ಕೋಟ್ಯಂತರ ರು. ನಷ್ಟವಾಗಿದೆ. ಈ ಹಣವನ್ನು ಹೆದ್ದಾರಿ ಪ್ರಾಧಿಕಾರದ ವತಿಯಿಂದ ಭರಿಸಲು ಕಾನೂನು ಕ್ರಮಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ಎಂ.ಐ.ಪ್ರವೀಣ್ ಅವರ ಪ್ರಸ್ತಾಪಕ್ಕೆ ಧ್ವನಿಗೂಡಿಸಿ ಪ್ರಿಯಾಂಕಾ, ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತ ಸಂಭವಿಸಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಕಾಮಗಾರಿಯ ಸಂದರ್ಭದಲ್ಲಿ ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಹಾನಿಗೊಳಗಾಗಿ ಹಲವಾರು ಸಮಸ್ಯೆಗಳು ಎದುರಾಗಿವೆ. ಪುರಸಭೆಗೆ ಹೆದ್ದಾರಿ ನಿರ್ಮಾಣದಿಂದ ಉಂಟಾಗಿರುವ ನಷ್ಟ ಭರಿಸಿಕೊಳ್ಳಲು ಕಾನೂನು ಕ್ರಮದ ಮಾರ್ಗವೇ ಸೂಕ್ತವಾಗಿದೆ ಎಂದು ಪ್ರಿಯಾಂಕಾ ಸಲಹೆ ನೀಡಿದರು.
ಅಂತಿಮವಾಗಿ ಈ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷ ಸುರೇಶ್ ಕುಮಾರ್ ಮಾತನಾಡಿ, ಪುರಸಭೆಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಹೆದ್ದಾರಿ ಪ್ರಾಧಿಕಾರದಿಂದ ವಸೂಲಿ ಮಾಡುವ ಬಗ್ಗೆ ಈಗಾಗಲೇ ಕಾನೂನು ಸಲಹೆ ಪಡೆಯಲಾಗುತ್ತಿದೆ, ಅಂತಿಮವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುಮತಿ ದೊರೆತ ನಂತರ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದ ನಂತರ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಭೆಗೆ ಭರವಸೆ ನೀಡಿದರು.
Mandya: ಉದ್ಘಾಟನೆಗೆ ಮುನ್ನವೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿರುಕು..!
ಪುರಸಭೆ ವ್ಯಾಪ್ತಿಯ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಹಳೆ ಎಂ.ಸಿ.ರಸ್ತೆ ಮಾರ್ಗ ಕೊಲ್ಲಿ ವೃತ್ತದವರೆಗಿನ ಮುಖ್ಯ ರಸ್ತೆ ಹಾಗೂ ಇನ್ನಿತರ ರಸ್ತೆಗಳು ಮಳೆಯಿಂದಾಗಿ ಹಾನಿಗೊಳಗಾಗಿರುವುದರಿಂದ ಇವುಗಳನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಯಿತು.
ರಸ್ತೆಗಳ ದುರಸ್ತಿಗೆ ಪುರಸಭೆ ಅನುದಾನದಲ್ಲಿ 10 ಲಕ್ಷ ರು. ಅನುದಾನದಲ್ಲಿ ಬಳಸಿಕೊಂಡು ಅತೀ ಜರೂರಾಗಿ ದುರಸ್ತಿ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಪ್ರಭಾರ ಮುಖ್ಯಾಧಿಕಾರಿ ಚಂದ್ರಶೇಖರ್ ಸದಸ್ಯರಾದ ಕೋಕಿಲ ಅರುಣ್, ವನಿತಾ, ಲತಾ ರಾಮು, ಆದಿಲ್, ಬಸವರಾಜು, ನಂದೀಶ್, ಸಿದ್ದರಾಜು, ಸರ್ವ ಮಂಗಳ ಇತರರು ಇದ್ದರು.