ಮಂಡ್ಯ(ಆ.15): ಜಿಲ್ಲೆಯ ಪ್ರಮುಖ ನದಿಗಳಲ್ಲಿ ಸಾಕಷ್ಟು ಪ್ರವಾಹ ಬಂದು ಲಕ್ಷಗಟ್ಟಲೆ ನೀರು ತಮಿಳುನಾಡು ಸೇರಿದರೂ ಕೆರೆ ಕಟ್ಟೆಗಳಿಗೆ ನೀರು ಸಿಗಲೇ ಇಲ್ಲ. ಈ ವಿಷಾದದ ಜೊತೆಗೆ ತಾಲೂಕಿನಲ್ಲಿ ಇರುವ ಒಂದೇ ನದಿ ಶಿಂಷಾದಲ್ಲೂ ಕೂಡ ಹನಿ ನೀರು ಸಿಗದೆ ಪರಿತಪಿಸುತ್ತಿರುವುದು ಜನರ ದೌರ್ಭಾಗ್ಯವೇ ಸರಿ.

ಮದ್ದೂರು ತಾಲೂಕು ಬರದ ಛಾಯೆಯಲ್ಲೇ ಸಿಲುಕಿದೆ. ಎಲ್ಲೆಡೆ ನೀರಿನ ಸಂಭ್ರಮ ಇದ್ದರೆ ಶಿವಪುರದ ಬಳಿ ಇರುವ ಶಿಂಷಾ ನದಿ ನೀರಿಲ್ಲದೇ ಶೋಕದಲ್ಲೇ ಮುಳುಗಿದೆ. ಸನೀರು ಕಾವೇರಿಯಿಂದ ತಮಿಳುನಾಡಿಗೆ ಹರಿದು ಹೋದರೂ ಶಿಂಷಾ ನದಿಗೆ ಹನಿ ನೀರು ಹರಿಸುವ ಅವಕಾಶವೇ ಇಲ್ಲ. ಹೀಗಾಗಿ ಈಡೀ ಶಿಂಷಾ ನದಿ ಬತ್ತಿ ಹೋಗಿದೆ.

ನದಿ ಹುಟ್ಟುವುದು ಎಲ್ಲಿ?

ಶಿಂಷಾ ನದಿ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕು ಹುಲಿಯೂರು ದುರ್ಗ ಹೋಬಳಿಯ ದೇವರಾಯನ ದುರ್ಗದಲ್ಲಿ ಹುಟ್ಟುತ್ತದೆ. ಮದ್ದೂರು ತಾಲೂಕಿನಲ್ಲಿ ಹಾಯ್ದು, ಮಳವಳ್ಳಿ ತಾಲೂಕಿನ ಬೆಂಕಿ ಪಾಲ್ಸ್‌ ಬಳಿ ಕಾವೇರಿ ನದಿ ಸೇರುವ ಶಿಂಷೆ ತನ್ನ 221 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಮಳೆ ಕೊರತೆ ಹಿನ್ನೆಲೆಯಲ್ಲಿ ಬರಿದಾಗಿರುವ ದೃಶ್ಯ ಕಾಣಸಿಗುತ್ತಿದೆ.

ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ

ಶಿಂಷಾ ನದಿಯುದ್ದಕ್ಕೂ 15ಕ್ಕೂ ಹೆಚ್ಚು ಚೆಕ್‌ ಡ್ಯಾಮ್‌ ಗಳಿವೆ. ಪ್ರಮುಖ ಏತ ನೀರಾವರಿಗಳು ಮತ್ತು ಅಣೆಕಟ್ಟೆಯನ್ನು ಹೊಂದಿದ್ದು ನದಿ ಪಾತ್ರದುದ್ದಕ್ಕೂ ಸಾವಿರಾರು ಎಕರೆ ಖುಷ್ಕಿ ಜಮೀನಿಗೆ ನೀರುಣಿಸುವ ರೈತರ ಪಂಪ್‌ ಸೆಟ್‌ಗಳಿಗೆ ಜೀವ ಸೆಲೆ. ತಾಲೂಕಿನಲ್ಲೇ 8 ಏತನೀರಾವರಿಗಳು ಯೋಜನೆಗಳಿವೆ. ವೈದ್ಯನಾಥಪುರ ಬಳಿ ಇರುವ ಬಾಣಂಜಿಪಂಥ… ಮತ್ತು ಇಗ್ಗಲೂರು ಸಮೀಪದ ಕಣ್ವ ಏತನೀರಾವರಿ ಯೋಜನೆಗಳು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 50ಕ್ಕೂ ಹೆಚ್ಚು ಕೆರೆಗಳಿಗೆ ನೀರೊದಗಿಸುವ ಪ್ರಮುಖ ಸ್ಥಾವರಗಳು.

ನದಿಯಲ್ಲಿ ಗಿಡಗಂಟಿ ಬೆಳೆದಿದೆ:

ಕಳೆದ ವರ್ಷವೂ ಶಿಂಷಾ ನದಿಗೆ ಸಾಕಷ್ಟುಪ್ರಮಾಣದಲ್ಲಿ ಬರಲಿಲ್ಲ. ಸತತ ಬರ, ಮುಂಗಾರು ವೈಫಲ್ಯ, ಮಳೆ ಕೊರತೆಯ ನಡುವೆ ಶಿಂಷಾನದಿ ಹುಟ್ಟಿಹರಿಯುವ ತಾಣದಿಂದ ಆರಂಭಗೊಂಡು ಕಾವೇರಿ ನದಿ ಸೇರುವ ಕಡೆಯ ಭಾಗ ಬೆಂಕಿ ಪಾಲ್ಸ್‌ ವರೆವಿಗೂ ನೀರಿಲ್ಲದೆ ಬಣಗುಟ್ಟತ್ತಿದೆ. ನದಿ ಒಡಲಿನಲ್ಲಿ ಕಳೆ ಸಸ್ಯಗಳು, ಗಿಡಗಂಟೆಗಳ ತಾಣವಾಗಿದೆ. ಮಳೆಗಾಲದಲ್ಲೂ ಹನಿ ನೀರು ನದಿಯ ಒಡಲು ಸೇರದೇ ಇರುವುದು ವಿಪರ್ಯಾಸವೇ ಸರಿ.

ಪರಿಹಾರ ಇದ್ದರೂ ಇಚ್ಛಾಶಕ್ತಿ ಇಲ್ಲ:

ಕಾವೇರಿ ನದಿಯ ನೀರನ್ನು ಶಿಂಷಾ ಹರಿಸಲು ಅವಕಾಶವಿದೆ. ಆದರೆ ಸರ್ಕಾರ ಮತ್ತು ಜನ ಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲ. ಮೂರು - ನಾಲ್ಕು ದಿನಗಳ ಕಾಲ ಕೆಆರ್‌ಎಸ್‌ನಿಂದ ಒಂದೂವರೆ ಯಿಂದ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿಸಲಾಯಿತು. ಆದರೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ವಿಸಿ ನಾಲೆ ಮತ್ತು ಶಿಂಷಾ ಎಡ ಮತ್ತು ಬಲದಂಡ ನಾಲೆಗಳಿಗೆ ಸತತವಾಗಿ ನೀರು ಹರಿಸಿದ್ದರೆ ನಾಲೆಗಳ ನೀರು ಶಿಂಷಾ ನದಿ ಸೇರುತ್ತದೆ ಎಂಬ ಕನಸು ಯಾರಿಗೂ ಬೀಳಲೇ ಇಲ್ಲ.

ನಾಲಾ ಬಯಲಿನಲ್ಲಿ ಕೆರೆಗಳು ಖಾಲಿ:

ಜಿಲ್ಲೆಯ ಕೆರೆ, ಕಟ್ಟೆಗಳು ಖಾಲಿಯಾಗಿಯೇ ಉಳಿದಿದ್ದು ವಿಸಿ ನಾಲಾ ಬಯಲಿನ ಜಮೀನುಗಳಿಗೆ ನೀರಿನ ಕೊರತೆ ಇದೆ. ರೈತರು ಬೀಳು ನೀರು ಶಿಂಷಾ ನದಿ ಸೇರಬಹುದಾದ ಸಾಧ್ಯತೆಗಳು ಈವರೆವಿಗೂ ಇಲ್ಲದಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಕೆಆರ್‌ಎಸ್‌ ಅಣೆಕಟ್ಟೆಭರ್ತಿಯಾಗಿದ್ದರೂ ಜಿಲ್ಲೆಯ ಕೆರೆಕಟ್ಟೆಗಳು ತುಂಬದೆ ಇತ್ತ ಮಳೆಯೂ ಇಲ್ಲದೆ ಶಿಂಷಾ ನದಿ ಬರಿದಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನದಿ ಪಾತ್ರದ ಏತ ನೀರಾವರಿಗಳು, ಚೆಕ್‌ ಡ್ಯಾಮ್‌, ಪ್ರಮುಖ ಅಣೆಕಟ್ಟೆನೀರಿನ ಸೆಲೆ ಇಲ್ಲದೆ ಬಸವಳಿದಿವೆ. ಈ ಭಾಗದ ಕೊಳವೆ ಬಾವಿಗಳು ಅಂತರ್ಜಲ ಮಟ್ಟಕುಸಿತಕ್ಕೆ ಒಳಗಾಗಿ ನೀರು ಬರಿದಾಗಿದೆ. ಯಾರಿಗೂ ಕಾಳಜಿ ಇಲ್ಲ. ಪ್ರಕೃತಿ ಮಾತೆ ಒಂದಡೆ ಮುನಿಸಿಕೊಂಡರೆ ಮತ್ತೊಂದೆಡೆ ಜನರ ಜೀವವನ್ನೇ ಹಿಂಡುತ್ತಿದ್ದಾಳೆ. ಇದನ್ನೇ ಪ್ರಕೃತಿಯ ವಿಪರ್ಯಾಸ ಮತ್ತು ವೈಪರಿತ್ಯಗಳು ಎನ್ನುವುದು.