ವಿಜಯಪುರದಲ್ಲಿ ಹೆಮ್ಮಾರಿ ಗಂಟುರೋಗದ ಆರ್ಭಟ, 151ಜಾನುವಾರುಗಳು ಬಲಿ!
ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗಂಟುರೋಗ ಬೆಂಬಿಡದಂತೆ ಕಾಡ್ತಿದೆ. ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮಹಾಮಾರಿ ಗಂಟುರೋಗ ಹಬ್ಬುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.20): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗಂಟುರೋಗ ಬೆಂಬಿಡದಂತೆ ಕಾಡ್ತಿದೆ. ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮಹಾಮಾರಿ ಗಂಟುರೋಗ ಹಬ್ಬುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಇತ್ತ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ರೋಗವನ್ನ ಹತೋಟಿಗೆ ತರಲು ನಾನಾ ತಂತ್ರಗಳನ್ನ ಪ್ರಯೋಗಿಸುತ್ತಿದ್ದಾರೆ. ಜೊತೆಗೆ ಲಸಿಕೆ ಹಾಕುತ್ತಿರೋ ಮಧ್ಯೆಯೂ ಮಹಾಮಾರಿ ಚರ್ಮಗಂಟು ರೋಗಕ್ಕೆ ಈ ವರೆಗೆ 151 ಜಾನುವಾರುಗಳು ಬಲಿಯಾಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.
ಗಡಿಯಲ್ಲಿ 6 ಚೆಕ್ ಪೋಸ್ಟ್, ಜಾನುವಾರು ಸಂತೆ ನಿಷೇಧ:
ಚರ್ಮಗಂಟು ರೋಗ ಮೊದಲು ಮಹಾರಾಷ್ಟ್ರ ರಾಜ್ಯದ ಆರಂಭದಲ್ಲಿ ಹೆಚ್ಚಾಗಿ ಕಂಡುಬಂದಿದೆ. ಈ ಬೆನ್ನಲ್ಲೇ ವಿಜಯಪುರ ಜಿಲ್ಲಾಡಳಿತ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗಡಿಭಾಗದಲ್ಲಿ 6ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ, ಜಾನುವಾರು ಸಾಗಾಟಕ್ಕೆ ನಿರ್ಬಂಧ ಹೇರಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಜಾನುವಾರು ಜಾತ್ರೆ,ಸಂತೆ ನಿಷೇಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಬಲಿಪಡೆಯುತ್ತಿದೆ ಚರ್ಮಗಂಟು ರೋಗ
ಚರ್ಮಗಂಟು ಮಾರಿಗೆ 151 ಜಾನುವಾರು ಬಲಿ:
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 379190 ಜಾನುವಾರುಗಳಿವೆ. 206 ಗ್ರಾಮಗಳಿಗೆ ಚರ್ಮಗಂಟು ರೋಗ ವ್ಯಾಪಿಸಿದೆ, ಈವರೆಗೆ 1144ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲಿದ್ದು 151ಜಾನುವಾರುಗಳು ರೋಗಕ್ಕೆ ಬಲಿಯಾಗಿವೆ.190256 ಜಾನುವಾರುಗಳಿಗೆ ಗೋಟ್ ಫಾಕ್ಸ್ ವ್ಯಾಕ್ಸಿನ್ ಹಾಕಲಾಗಿದೆ. ಇನ್ನುಳಿದ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರೈತರು ಮುಂಜಾಗೃತಾ ಕ್ರಮವಾಗಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ರೈತನ ಬದುಕನ್ನೇ ಬರ್ಬಾದ್ ಮಾಡಿದ ಲಂಪಿಸ್ಕಿನ್ ರೋಗ: ಬಂದಷ್ಟು ಬೆಲೆಗೆ ಎತ್ತು ಮಾರಾಟ ಮಾಡುತ್ತಿರುವ ಅನ್ನದಾತ..!
ಬಲಿಯಾದ ಜಾನುವಾರು ಮಾಲಿಕರಿಗೆ ಪರಿಹಾರ:
ಜೊತೆಗೆ ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಪರಿಹಾರ ವಿತರಣೆ ಕಾರ್ಯವೂ ನಡೆಯುತ್ತಿದೆ. ನಿಗದಿತ ನಮೂನೆಯಲ್ಲಿ ಜಾನುವಾರು ಮರಣೋತ್ತರ ಪರೀಕ್ಷೆ ಹಾಗೂ ಭಾವಚಿತ್ರದೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ 151 ಮೃತ ಜಾನುವಾರುಗಳ ಪೈಕಿ ಎಂಟು ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ ತಿಳಿಸಿದ್ದಾರೆ.