ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ
ಬಿಡಾಡಿ ದನಗಳ ಆರೈಕೆಯೇ ತೊಡ್ಡ ತೊಂದರೆ, ರೈತರಿಗೆ ಗಾಯದ ಮೇಲೆ ಬರೆ ಎಳೆದ ಮಹಾಮಾರಿ
ಮಹೇಶ ಛಬ್ಬಿ
ಗದಗ(ಅ.27): ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಚರ್ಮ ಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಿದರೂ ರೋಗ ಹರಡುವಿಕೆ ನಿಯಂತ್ರಣಕ್ಕೆ ಬಾರದಂತಾಗಿದ್ದು, ಗದಗ- ಬೆಟಗೇರಿ ಅವಳಿ ನಗರದಲ್ಲಿ ಬಿಡಾಡಿ ದನಗಳು ಚರ್ಮ ಗಂಟು ರೋಗ ಬಾಧೆಗೆ ತುತ್ತಾಗಿ ಬಳಲುತ್ತಿವೆ.
ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ರೋಣ, ನರಗುಂದ, ಗಜೇಂದ್ರಗಡ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚರ್ಮ ಗಂಟು ರೋಗ ಬಾಧೆಗೆ ಸಾಕಷ್ಟು ಜಾನುವಾರುಗಳು ಸಾವನ್ನಪ್ಪಿದ್ದು, ಇದರಿಂದ ಜಾನುವಾರುಗಳನ್ನು ಹೇಗೆ ರಕ್ಷಿಸಬೇಕು ಎಂಬುದು ರೈತರಲ್ಲಿ ಯಕ್ಷಪ್ರಶ್ನೆಯಾಗಿ ಉಳಿದಿದೆ. ಕೃಷಿ ಚಟುವಟಿಕೆಗಳಿಗೆ, ಹೈನುಗಾರಿಕೆಗೆ ತಂದ ಜಾನುವಾರುಗಳು ಚರ್ಮಗಂಟು ರೋಗ ಬಾಧೆಗೆ ತುತ್ತಾಗುತ್ತಿದ್ದು, ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ದೂಡಿದೆ. ಮೊದಲೇ ರಣಭೀಕರ ಮುಂಗಾರು ಮಳೆಗೆ ಮನೆ, ಹೊಲ, ಬೆಳೆದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರಿಗೆ ಜಾನುವಾರುಗಳಿಗೆ ವಕ್ಕರಿಸಿದ ರೋಗದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
Lumpy Skin Disease: ರೋಗಕ್ಕೆ ಬಲಿಯಾದ ಜಾನುವಾರುಗಳಿಗೆ ಬಂತು ಪರಿಹಾರ!
ಬಿಡಾಡಿ ದನಗಳಿಗೆ ಆರೈಕೆ ಹೇಗೆ?:
ಚರ್ಮ ಗಂಟು ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸಾಕಿದ ಜಾನುವಾರುಗಳು ರೋಗ ಬಾಧೆಯಿಂದ ಬಳಲುತ್ತಿದ್ದರೆ ಅದಕ್ಕೆ ತಕ್ಷಣವೇ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿ ಮುಂಜಾಗೃತ ಲಸಿಕೆಯಾಗಲಿ ಅಥವಾ ಚಿಕಿತ್ಸೆಯಾಗಲಿ ನೀಡಿ ಆರೈಕೆ ಮಾಡುತ್ತಾರೆ. ಅಷ್ಟಾದರೂ ಕೂಡಾ ರೋಗದ ತೀವ್ರತೆಯಿಂದ ಜಿಲ್ಲೆಯಲ್ಲಿ ಸಾಕಷ್ಟುಜಾನುವಾರಗಳು ಸಾವನ್ನಪ್ಪಿವೆ. ಅಂತದರಲ್ಲಿ ಬಿಡಾಡಿ ದನಗಳಿಗೆ ಯಾರು ಆರೈಕೆ ಮಾಡುವರು ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಬಿಡಾಡಿ ದನಗಳು ಗುಂಪು ಗುಂಪಾಗಿಯೇ ಇರುವುದರಿಂದ ಒಂದು ಜಾನುವಾರು ರೋಗದಿಂದ ಬಳಲುತ್ತಿದ್ದರೆ ಇನ್ನುಳಿದ ಜಾನುವಾರುಗಳಿಗೂ ತೀವ್ರವಾಗಿ ರೋಗ ಹರಡುತ್ತದೆ. ಜಿಲ್ಲಾಡಳಿತವು ಬಿಡಾಡಿ ದನಗಳಿಗೆ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಲು ಹಾಗೂ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಚರ್ಮಗಂಟು ರೋಗಕ್ಕೆ ತುತ್ತಾಗಿರುವ ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುವ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ವ್ಯಾಪಕವಾಗಿ ಹರಡುತ್ತಿರುವ ರೋಗದ ನಿಯಂತ್ರಣಕ್ಕೆ ಪರಿಣಾಮಕಾರಿ ಚಿಕಿತ್ಸೆ ಒದಗಿಸಬೇಕು. ಜಾನುವಾರಗಳನ್ನು ಕಳೆದುಕೊಂಡ ರೈತರಿಗೆ ಸರ್ಕಾರ ಕೂಡಲೆ ಪರಿಹಾರ ಒದಗಿಸಬೇಕು. ಬಿಡಾಡಿ ದನಗಳು ರೋಗದಿಂದ ಬಳಲುತ್ತಿದ್ದು, ಅವುಗಳ ಚಿಕಿತ್ಸೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮುಂದಾಗಬೇಕು ಹಾಗೂ ಜಿಲ್ಲೆಯ ಎಲ್ಲ ಬಿಡಾಡಿ ದನಗಳಿಗೂ ಮುಂಜಾಗೃತ ಕ್ರಮವಾಗಿ ಚುಚ್ಚುಮದ್ದು ಹಾಕುವುದಕ್ಕೆ ಕ್ರಮ ಕೈಗೊಳ್ಳಬೇಕು ಅಂತ ಮುಳಗುಂದ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದ್ದಾರೆ.