ಬೆಂಗಳೂರು [ಡಿ.14]:  ವಿವಾಹವಾದ ಬಳಿಕ ಉತ್ತಮ ಜೀವನ ನಡೆಸಲೆಂದು ಪ್ರಿಯತಮನ ಜತೆ ಸೇರಿ ಸರ ಕಳ್ಳತನಕ್ಕೆ ಇಳಿದಿದ್ದ ಪ್ರೇಮಿಗಳಿಬ್ಬರು ಚಂದ್ರ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕುಂಬಳಗೋಡು ಸಮೀಪದ ರಾಮೋಹಳ್ಳಿ ನಿವಾಸಿಗಳಾದ ಹರೀಶ್‌(22) ಮತ್ತು ಈತನ ಪ್ರೇಯಸಿ ಭೂಮಿಕಾ ಅಲಿಯಾಸ್‌ ನೇಹಾ(18) ಹಾಗೂ ಕಾನೂನು ಸಂಘರ್ಷಕ್ಕೊಳಕ್ಕೆ ಒಳಗಾದವನನ್ನು ಸೇರಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 46 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್‌ ಚಾಲಕನಾಗಿರುವ ಹರೀಶ್‌ ಮತ್ತು ನೆರೆ ಮನೆ ನಿವಾಸಿ ಭೂಮಿಕಾ ಇಬ್ಬರು ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹರೀಶ್‌ಗೆ ಬರುತ್ತಿದ್ದ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಅಲ್ಲದೆ, ಪ್ರಿಯತಮೆಯ ಇಷ್ಟಗಳನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇಬ್ಬರು ಸೇರಿ ಸರ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಕೆಲ ತಿಂಗಳ ಹಿಂದೆ ಹರೀಶ್‌ ಹಾಗೂ ಕಾನೂನು ಸಂಘರ್ಷಕ್ಕೊಳಗಾದವನ ಜತೆ ಕುಂಬಳಗೋಡು ಸಮೀಪದಲ್ಲಿ ಸರಗಳ್ಳತನ ಮಾಡಿ, ಕೆಂಗೇರಿಯಲ್ಲಿ ಫೈನಾನ್ಸ್‌ವೊಂದರಲ್ಲಿ ಅಡಮಾನ ಇಟ್ಟಿದ್ದ. ಬಳಿಕ ಇದನ್ನೇ ವೃತ್ತಿಯಾಗಿಸಿಕೊಂಡಿದ್ದ. ನಂತರ ಪ್ರೇಯಸಿಯೊಂದಿಗೆ ಕೃತ್ಯಕ್ಕೆ ಇಳಿದಿದ್ದ. 

ಹಾಸನ: ಮದುವೆ ಮಾಡ್ಕೊಂಡು ರಕ್ಷಣೆಗೆ ಮನವಿ, ವೈರಲ್ ಆಯ್ತು ಪ್ರೇಮಿಗಳ ವಿಡಿಯೋ...

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು ರಸ್ತೆಯಲ್ಲಿ ನಿರ್ಜನ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಅವರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದರು. ನಿರ್ಜನ ಪ್ರದೇಶಕ್ಕೆ ಹೋಗುತ್ತಿದ್ದಂತೆ ಬೈಕ್‌ನ ಹಿಂಬದಿ ಕುಳಿತಿದ್ದ ನೇಹಾ ಸರ ಕಸಿದುಕೊಳ್ಳುತ್ತಿದ್ದಳು. ಬಳಿಕ ಇಬ್ಬರು ಜ್ಞಾನಭಾರತಿ ಕ್ಯಾಂಪಸ್‌ ಮೂಲಕ ಕುಂಬಳಗೋಡಿಗೆ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

‘8ನೇ ಕ್ಲಾಸ್‌ ಫೇಲ್‌, ಐಪಿಎಸ್‌ ಕನಸು!’

ಬಂಧನಕ್ಕೊಳಗಾದ ಭೂಮಿಕಾ ವಿಚಾರಣೆ ವೇಳೆ ಐಪಿಎಸ್‌ ಮಾಡಬೇಕೆಂದು ಕನಸು ಕಂಡಿದ್ದೇನೆ. ತರಬೇತಿ ಪಡೆಯಲು ಶುಲ್ಕ ಕಟ್ಟಲು ಹಣ ಇಲ್ಲದರಿಂದ ಈ ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಳು. ಆಕೆಯ ಹೇಳಿಕೆಯಿಂದ ಅಚ್ಚರಿಗೊಂಡ ಪೊಲೀಸರು ಆಕೆಯ ವಿದ್ಯಾಭ್ಯಾಸದ ಪ್ರಮಾಣ ಪತ್ರ ನೋಡಿದಾಗ ಎಂಟನೇ ತರಗತಿಯಲ್ಲಿ ಅನುತ್ತೀರ್ಣಗೊಂಡು ಶಾಲಾ ವಿದ್ಯಾಭ್ಯಾಸ ಮೊಟಕುಗೊಳಿಸಿರುವುದು ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ಬಂಧನದಿಂದ ಕುಂಬಳಗೋಡು ಠಾಣಾ ವ್ಯಾಪ್ತಿ, ಚಂದ್ರಲೇಔಟ್‌, ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿನ ಸರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.