ಬಾಗಲಕೋಟೆಯ ಮದನಮಟ್ಟಿ ಗ್ರಾಮದ ಶಿಕ್ಷಕ ಬಸವರಾಜ್ ಬಾಡಗಿ 35 ವರ್ಷಗಳಲ್ಲಿ 53,000ಕ್ಕೂ ಹೆಚ್ಚು ಪತ್ರಗಳನ್ನು ಬರೆದು ದಾಖಲೆ ನಿರ್ಮಿಸಿದ್ದಾರೆ. ವಾಟ್ಸಾಪ್ ಯುಗದಲ್ಲೂ ಪತ್ರ ಬರೆಯುವ ಈ ಅಪರೂಪದ ಹವ್ಯಾಸವು ದೇಶ-ವಿದೇಶದ ಗಣ್ಯರ ಗಮನ ಸೆಳೆದಿದೆ.

ಬಾಗಲಕೋಟೆ: ಎಐ ಮತ್ತು ವಾಟ್ಸಾಪ್ ಸೇರಿ ಸಾಮಾಜಿಕ ಜಾಲತಾಣ ಭರಾಟೆ ಮಧ್ಯೆಯೂ ಬಾಗಲಕೋಟೆಯಲ್ಲೊಬ್ಬ ಸರ್ಕಾರಿ ಶಾಲೆಯ "ಪತ್ರ ಪ್ರೇಮಿ ಶಿಕ್ಷಕ"ರೊಬ್ಬ ದಾಖಲೆ ಬರೆದಿದ್ದಾರೆ. 1989 ರಿಂದ 2026 ರವರೆಗೆ 35 ವರ್ಷದಲ್ಲಿ ಶಿಕ್ಷಕ ಬರೋಬ್ಬರಿ 53,000ಕ್ಕೂ ಅಧಿಕ ಪತ್ರ ಬರೆದು ಲೇಟರ್ ಮ್ಯಾನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ವಾಟ್ಸಾಪ್-AI ಯುಗದಲ್ಲೂ ಪತ್ರಪ್ರೇಮಿ

ಬಾಗಲಕೋಟೆ ಜಿಲ್ಲೆಯ ಮದನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ್ ಬಾಡಗಿ ಪತ್ರದ ಪ್ರೇಮಿಯಾಗಿದ್ದು, ಪ್ರಾನ್ಸ್, ಇಂಗ್ಲೆಂಡ್, ರಷ್ಯಾ, ಅಮೆರಿಕ, ಕೆನಡಾ ಸೇರಿದಂತೆ ದೇಶದ ಗಣ್ಯರಿಗೂ ಪತ್ರ ಬರೆದಿದ್ದಾರೆ. ವಿಶೇಷ ಎಂದರೆ ಪ್ರಾನ್ಸ್ ದೇಶದ ಪ್ರೆಸಿಡೆಂಟ್ ನಿಂದಲೇ ಮರು ಪತ್ರ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

35 ವರ್ಷದಲ್ಲಿ 53,000+ ಪತ್ರ ಬರೆದ ಶಿಕ್ಷಕ

ಪ್ರತಿವರ್ಷ ಅಕ್ಟೋಬರ್ ದಿಂದ ಡಿಸೆಂಬರ್ ವರೆಗೆ ಪತ್ರ ಬರೆಯುವದನ್ನು ಕಾಯಕವನ್ನಾಗಿ ಮಾಡುವ ಶಿಕ್ಷಕ ಬಸವರಾಜ್ ಬಾಡಗಿ ಅವರು, ಪತ್ರದ ಮೂಲಕ ಹೊಸ ವರ್ಷದ ಹಾಗೂ ಮಕರ ಸಂಕ್ರಮಣದ ಶುಭ ತಿಳಿಸುತ್ತಾರೆ. ಡಿಸೆಂಬರ್ ಕೊನೆ ವಾರ ಬರೆದಂತಹ ಎಲ್ಲಾ ಪತ್ರಗಳನ್ನ ಪೋಸ್ಟ್ ಮಾಡುತ್ತಾರೆ.

ಬಾಗಲಕೋಟೆಯ ‘ಲೆಟರ್ ಮ್ಯಾನ್’ ಶಿಕ್ಷಕ ಬಸವರಾಜ್ ಬಾಡಗಿ

ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ದೇಶದ ಎಲ್ಲಾ ರಾಜ್ಯಗಳ ಗಣ್ಯರಿಗೆ ಶುಭ ಕೋರಿ ಪತ್ರ ರವಾಣಿಸಿರುವ ಶಿಕ್ಷಕ ಬಸವರಾಜ್, ಇಂದಿಗೂ ಹಲವರಿಗೆ ಮಾದರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಲ ಕಳೆಯುತ್ತಿರುವ ಇಂದಿನ ಯುವ ಪೀಳಿಗೆಗೆ, ಇತರರಿಗೂ ಪತ್ರ ಬರೆಯುವ ಹವ್ಯಾಸ ಕಲಿಸುವ ಮೂಲಕ ಮಾದರಿಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ತಿಂಗಳಿಗೆ 10 ಪತ್ರ ಬರೆಸುವ ಶಿಕ್ಷಕ

ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ತಿಂಗಳಿಗೆ ಕನಿಷ್ಠ 10 ಪತ್ರ ಬರೆಸುತ್ತಿದ್ದು, 2027ರ ಹೊಸ ವರ್ಷಕ್ಕಾಗಿ 3,000 ಪತ್ರ ಬರೆಯುವ ಗುರಿ ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಶಿಕ್ಷಕನ ಕಾರ್ಯ ಗಮನ ಸೆಳೆದಿದೆ. ಹೊಸ ವರ್ಷ, ಸಂಕ್ರಮಣ, ದಸರಾ ಹಾಗೂ ದೀಪಾವಳಿ ಹಬ್ಬ ಸೇರಿ ‌ಇತರ ಯಾವುದೇ ಹಬ್ಬ ಹರಿದಿನ ಶುಭಾಶಯಗಳಿಗೂ ಸಹ ಪತ್ರದ ಮೂಲಕ ಸಂದೇಶ ನೀಡುತ್ತಿದ್ದಾರೆ.

‘ಪತ್ರವೇ ನನ್ನ ಪ್ರೀತಿ’; ಶಿಕ್ಷಕ ಬಸವರಾಜ್ ಬಾಡಗಿಯ ಅಪರೂಪದ ಹವ್ಯಾಸ

ಸ್ನೇಹಿತರು, ಬಂಧು ಬಳಗ, ಮುಖ್ಯಮಂತ್ರಿಗಳ ಕಚೇರಿ, ಮಂತ್ರಿಗಳು, ಶಾಸಕರ ಕಚೇರಿಗಳು ಸಂಸದರು, ಗಣ್ಯರು, ಚಲನಚಿತ್ರ ನಟರು, ಪತ್ರಕರ್ತರು, ರಾಷ್ಟ್ರೀಯ & ಅಂತಾರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯುತ್ತಿದ್ದಾರೆ.

ಈ ಕುರಿತಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಅವರೊಂದಿಗೆ ಮಾತನಾಡಿದ ಪತ್ರ ಪ್ರೇಮಿ ಶಿಕ್ಷಕ ಬಸವರಾಜ್ ಬಾಡಗಿ, ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರ ಬರೆಯವುದು ನನ್ನ ಹವ್ಯಾಸವಾಗಿದೆ. 1989ರಿಂದ ಪತ್ರ ಬರೆಯುತ್ತಿದ್ದು, 2026ರ ವೇಳೆಗೆ ಇದುವರೆಗೂ 53 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದೇನೆ. ನಮ್ಮ ರಾಜ್ಯರು ಗಣ್ಯರು ಮಾತ್ರವಲ್ಲದೆ, ದೇಶ, ವಿದೇಶದ ಗಣ್ಯರಿಗೂ ಪತ್ರ ಬರೆದು ಶುಭಾಶಯ ತಿಳಿಸಿದ್ದೇನೆ. ಹಲವರು ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಾಟ್ಸಾಪ್, ಇನ್‌ ಸ್ಟಾ ಹಾಗೂ ತಂತ್ರಜ್ಞಾನಗಳು ಮುಂದುವರಿದರು, ಪತ್ರ ಬರೆಯುವುದನ್ನು ಮುಂದುವರಿಸಿದ್ದಕ್ಕೆ ಬಹಳ ಸಂತಸವಿದೆ. ಹಲವು ಗಣ್ಯರು ನನ್ನ ಪತ್ರಗಳಿಗೆ ಪ್ರಕ್ರಿಯೆ ನೀಡಿ ಮರುಪತ್ರ ಬರೆದಿರುವುದು ನನ್ನ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..