ಕೊಡಗು ಪ್ರಾಚೀನ ಕಾಲದಿಂದಲೂ ಬಹುಭಾಷಿಕ ನೆಲವಾಗಿದೆ. ಹಲವು ಜಾತಿ, ಪಂಗಡ ಬುಡಕಟ್ಟು, ಜನಾಂಗಗಳ ನೆಲೆಬೀಡು. ಇವರೆಲ್ಲರ ಮಾತೃಭಾಷೆಯಾಗಿ ಕೊಡವ, ಕನ್ನಡ, ಅರೆಭಾಷೆ, ತುಳು, ಬ್ಯಾರಿ, ಎರವ, ಕುರುಬ, ಕೊಂಕಣಿ ಮತ್ತಿತರ ಭಾಷೆಗಳಿವೆ ಎಂದು ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಪಿ.ರೇಖಾ ವಸಂತ್ ಅವರು ಪ್ರತಿಪಾದಿಸಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.04): ಕೊಡಗು ಪ್ರಾಚೀನ ಕಾಲದಿಂದಲೂ ಬಹುಭಾಷಿಕ ನೆಲವಾಗಿದೆ. ಹಲವು ಜಾತಿ, ಪಂಗಡ ಬುಡಕಟ್ಟು, ಜನಾಂಗಗಳ ನೆಲೆಬೀಡು. ಇವರೆಲ್ಲರ ಮಾತೃಭಾಷೆಯಾಗಿ ಕೊಡವ, ಕನ್ನಡ, ಅರೆಭಾಷೆ, ತುಳು, ಬ್ಯಾರಿ, ಎರವ, ಕುರುಬ, ಕೊಂಕಣಿ ಮತ್ತಿತರ ಭಾಷೆಗಳಿವೆ ಎಂದು ಸಮ್ಮೇಳನ ಅಧ್ಯಕ್ಷರಾದ ಡಾ.ಎಂ.ಪಿ.ರೇಖಾ ವಸಂತ್ ಅವರು ಪ್ರತಿಪಾದಿಸಿದ್ದಾರೆ. ಕೊಡಗು ಜಿಲ್ಲೆಯ ಗೋಣಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ (ಐ.ಮಾ.ಮುತ್ತಣ್ಣ ವೇದಿಕೆ)ಯಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಬಹುಭಾಷೆಯ ಮಾತೃಭಾಷೆ ಆಡಳಿತ ಭಾಷೆ. ಮತ್ತು ಕನ್ನಡ ಭಾಷೆ ಕೊಡಗಿನವರ ಸಾಹಿತ್ಯದೃಷ್ಠಿಗೆ ಎರಡು ಕಣ್ಣುಗಳಾಗಿವೆ. ಕೊಡವ-ಕನ್ನಡ ನನ್ನ ಸಾಹಿತ್ಯ ನೋಟದ ಎರಡು ನೇತ್ರಗಳು ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಟ್ಟಾಗಿಸುವ ಮಾತೃಸದೃಶ ಸಂಸ್ಥೆ ಆಗಿದೆ. ಇದು ಕೊಡಗಿನ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಶಕ್ತಿ ಮತ್ತು ಜವಾಬ್ದಾರಿ. ಮುಂದೆಯೂ ಶಕ್ತಿ ಕೇಂದ್ರವಾಗಿ ಬೆಳೆಯಬೇಕಿದೆ ಎಂದರು. ಭಾಷೆ ಬೇರೆ-ಭಾವ ಒಂದೇ. ಗಡಿಯಾರಗಳು ಬೇರೆ ಬೇರೆ, ಸಮಯ ಒಂದೇ ಅಂದರೆ ಗಡಿಯಾರವೇ ಸಮಯವಲ್ಲ, ಸಮಯ ಕಾಣುವುದಿಲ್ಲ. ಕೊಡಗಿನ ಕಾವೇರಿ ಜಾತ್ರೆ, ಹುತ್ತರಿ ಹಬ್ಬ, ಯುಗಾದಿ ಹಬ್ಬಗಳು ಈ ನಾಡಿನ ಸಾಂಸ್ಕೃತಿಕ ಸಾಮರಸ್ಯವನ್ನೇ ಪ್ರತಿನಿಧಿಸುತ್ತದೆ. 

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಎಲ್ಲರನ್ನೂ ಪೋಷಿಸುವ ಆ ಕಾಣದ ‘ಎಳೆ’ ಇಲ್ಲಿಯ ಸಂಸ್ಕೃತಿಯ ಶ್ರೇಷ್ಠತೆ ಹೊಂದಿದೆ ಎಂದು ರೇಖಾ ವಸಂತ್ ಅವರು ತಿಳಿಸಿದರು. ಆನೆ-ಮಾನವ ಸಂಘರ್ಷ ಕೊಡಗಿನ ಅರ್ಧ ಶತಮಾನಕ್ಕೂ ಮೀರಿದ ಸಮಸ್ಯೆ. ಅರಣ್ಯದ ಸುತ್ತ ಸೋಲಾರ್ ತಂತಿ ಹಾಗೂ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸುವ ಬದಲು ರಕ್ಷಿತಾರಣ್ಯಗಳಲ್ಲಿ ಆನೆಗೆ ಆಹಾರವಾಗಬಲ್ಲ ಗಿಡಮರಗಳನ್ನು ಹೆಚ್ಚು ಬೆಳೆಸುವಂತಾದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಪರಿಹಾರವಾಗಹುದೇನೋ ಎಂದು ಸಮ್ಮೇಳನ ಅಧ್ಯಕ್ಷರು ಸಲಹೆ ಮಾಡಿದರು. ಬುಡಕಟ್ಟು, ಆದಿವಾಸಿ, ಗಿರಿಜನ, ಮೂಲನಿವಾಸಿಗಳು, ಕಾರ್ಮಿಕರು ಅನಾದಿಕಾಲದಿಂದಲೂ ಕೊಡಗಿನ ಅವಿಭಾಜ್ಯ ಅಂಗ. 

ಆಧುನಿಕ ಸವಲತ್ತು, ಶಿಕ್ಷಣದಿಂದ ಇವತ್ತಿಗೂ ವಂಚಿತರಾಗಿರುವ ಇವರೆಲ್ಲರಿಗೂ ವಿಶೇಷವಾದ ಸಾಂಸ್ಕೃತಿಕ ಪರಂಪರೆ ಇದೆ. ಸಮೃದ್ದ ಜಾನಪದವಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಕೇವಲ ಮಾತಿನ ಮಂತ್ರವಾಗದೆ ಕೃತಿಯಾಗಬೇಕು. ಮಾನವ-ವನ್ಯಜೀವಿ ಸಂಘರ್ಷದ ಬಲಿಪಶುಗಳಾಗುತ್ತಿರುವ ಇವರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕಾದ ಜವಾಬ್ದಾರಿ ಸಮಾಜದ ಸರ್ವರದ್ದೂ ಆಗಿದೆ ಎಂದು ನುಡಿದರು. ಮನುಷ್ಯನ ನಡುವೆ ಇರಬೇಕಾದ ಎಲ್ಲಾ ಭಾವನಾತ್ಮಕ ಸಂಬಂಧಗಳನ್ನು ಮೊಬೈಲ್‍ನೊಂದಿಗೆ ಬೆಳೆಸಿಕೊಳ್ಳುತ್ತಿದ್ದೇವೆ. ಹೀಗಾಗಿ ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿವೆ. ಅತಿಯಾದರೆ ಅಮೃತವು ವಿಷವೆಂಬ ಸಂಗತಿಯನ್ನು ಮರೆಯತೊಡಗಿದ್ದೇವೆ. 

ಚುನಾವಣೆ ವೇಳೆ ಶಾಸಕ ಶರತ್‌ ರಾಜಕೀಯ ನಾಟಕ: ಸಚಿವ ಎಂಟಿಬಿ ನಾಗರಾಜ್‌

ಗೂಗಲ್‍ನಲ್ಲಿ ಸಿಗುವ ದಾಖಲೆಗಳೇ ಅಧಿಕೃತವೆಂದು ನಂಬುತ್ತ, ಅದಕ್ಕೆ ಮಾಹಿತಿಗಳನ್ನು ತುಂಬಿಸುವುದನ್ನು ‘ಮನುಷ್ಯರೇ’ ಎಂದು ತಿಳಿದೂ ತಿಳಿಯದಾಗಿದ್ದೇವೆ. ಕೊರೊನಾ ನಂತರ ಮೊಬೈಲ್‍ಗಳು ಪುಟ್ಟ ಮಕ್ಕಳಿಗೂ ಅಕ್ಷರಾಭ್ಯಾಸಕ್ಕೆ ಪೆನ್ನು, ಪೆನ್ಸಿಲ್‍ಗಳಿಗಿಂತಲೂ ಅನಿವಾರ್ಯವೆಂಬ ಸಂದರ್ಭವನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು. ಇದಕ್ಕೂ ಮೊದಲು ಜಿಲ್ಲೆಯ ಗಡಿಭಾಗ ಗೋಣಿಕೊಪ್ಪದ ಪ್ರಮುಖ ಬೀದಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು. ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡ ಕಂಪು ಬೀರಿದರು.