Asianet Suvarna News Asianet Suvarna News

ಕೊಡಗು: ಇಲಾಖೆ ಮಗ್ಗುಲಲ್ಲೇ ಅರಣ್ಯದಿಂದ ಮರಗಳ ಲೂಟಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಪೆರೂರು ಅರಣ್ಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭಾರೀ ಗಾತ್ರದ ಹಲವು ಮರಗಳನ್ನು ಕಡಿದು ಸಾಗಿಸಲಾಗಿದೆ. ಪೆರೂರಿನಲ್ಲಿ ಇರುವ ಬ್ರಹ್ಮಗಿರಿ ಸಂರಕ್ಷಿತ ಅರಣ್ಯ ಇದಾಗಿದ್ದು, ಸಂರಕ್ಷಿತ ಅರಣ್ಯದಿಂದಲೇ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿರುವುದು ಅಚ್ಚರಿ ಉಂಟು ಮಾಡಿದೆ. 

Looting of Trees in Kodagu Forest grg
Author
First Published Oct 8, 2023, 1:00 AM IST

ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಅ.08):  ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯವಿರುವುದು ಗೊತ್ತೇ ಇದೆ. ಆದರೆ ಆ ಅರಣ್ಯ ವಿವಿಧ ಕಾರಣಗಳಿಂದ ಕರಗಿ ಹೋಗುತ್ತಿದೆ ಎನ್ನುವುದನ್ನು ಇಂತಹ ಪ್ರಕರಣಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಸಂರಕ್ಷಿತ ಅರಣ್ಯದಿಂದ ಬೆಲೆಬಾಳುವ ಮರಗಳು ಲೂಟಿಯಾಗುತ್ತಿದ್ದರೂ ಅರಣ್ಯ ಇಲಾಖೆ ಗೊತ್ತಿದ್ದೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ. 

ಹೌದು, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಪೆರೂರು ಅರಣ್ಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭಾರೀ ಗಾತ್ರದ ಹಲವು ಮರಗಳನ್ನು ಕಡಿದು ಸಾಗಿಸಲಾಗಿದೆ. ಪೆರೂರಿನಲ್ಲಿ ಇರುವ ಬ್ರಹ್ಮಗಿರಿ ಸಂರಕ್ಷಿತ ಅರಣ್ಯ ಇದಾಗಿದ್ದು, ಸಂರಕ್ಷಿತ ಅರಣ್ಯದಿಂದಲೇ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿರುವುದು ಅಚ್ಚರಿ ಉಂಟು ಮಾಡಿದೆ. 

ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಕಚೇರಿಗಳ ಕಾಂಗ್ರೆಸ್‌ ಕಾರ್ಯಕರ್ತರ ದರ್ಬಾರ್: ಬಿಜೆಪಿ ಟೀಕೆ

ಒಂದೊಂದು ಜಾಗದಲ್ಲೂ ಭಾರೀ ಘಾತ್ರದ ನಾಲ್ಕೈದು ಮರಗಳನ್ನು ಮೆಷಿನ್ ಗರಗಸ ಬಳಸಿ ತುಂಡರಿಸಿ ಪಿಕಪ್ ವಾಹನಗಳಲ್ಲಿ ಸಾಗಿಸಲಾಗಿದೆ. ಮರಗಳನ್ನು ಸಾಗಿಸುವುದಾದರೂ ಅರಣ್ಯ ಇಲಾಖೆಯ ಕ್ವಾಟ್ರಸ್ ಮುಂಭಾಗದಲ್ಲಿಯೇ ಸಾಗಿಸಬೇಕು. ಹೀಗೆ ಅರಣ್ಯ ಇಲಾಖೆಯ ಕ್ವಾಟ್ರಸ್ ಮುಂಭಾಗದಲ್ಲಿಯೇ ಮರಗಳನ್ನು ಸಾಗಿಸಿದ್ದರೂ ಅರಣ್ಯ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಎನ್ನುವ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ.  ಎಲ್ಲದಕ್ಕಿಂತ ದೊಡ್ಡ ಪ್ರಶ್ನೆ ಎಂದರೆ ಈ ಮರಗಳನ್ನು ಕಡಿದು ಸಾಗಿಸಿ ಒಂದು ವಾರವಾಗಿದ್ದರೂ ಅರಣ್ಯ ಇಲಾಖೆ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆಗೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಅರಣ್ಯ ಇಲಾಖೆ ಕ್ವಾಟ್ರಸ್ ಪಕ್ಕದಲ್ಲಿಯೇ ಹಲವಾರು ಮರಗಳನ್ನು ಕಡಿದು ಸಾಗಿಸಿರುವುದನ್ನು ನೋಡಿದರೆ ಇದಕ್ಕೆಲ್ಲಾ ಅರಣ್ಯ ಇಲಾಖೆ ಕೆಲವು ಅಧಿಕಾರಿಗಳ ಪೂರ್ಣ ಬೆಂಬಲ ಇದೆ ಎನ್ನುವುದು ಸ್ಪಷ್ಟ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವೇ ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಮಳೆ ಸುರಿಯುತ್ತಿತ್ತು. ಆದರೆ ನಿರಂತರವಾಗಿ ಅರಣ್ಯವನ್ನು ನಾಶ ಮಾಡುತ್ತಿರುವ ಪರಿಣಾಮ ಇಂದು ಕೊಡಗಿನಲ್ಲಿ ಮಳೆಗಾಲದಲ್ಲಿಯೇ ಮಳೆ ಇಲ್ಲದಂತೆ ಆಗಿದೆ. ಬ್ರಹ್ಮಗಿರಿ ಅರಣ್ಯವೇ ಕಾವೇರಿ ನದಿಗೆ ಬಹಳ ಪ್ರಮುಖ ನೀರಿನ ಮೂಲವಾಗಿದ್ದು ಇದೇ ರೀತಿ ಅರಣ್ಯ ನಾಶ ಮಾಡಿದರೆ ಮುಂದೆ ಕೊಡಗಿನ ಕಾವೇರಿ ಬಹುತೇಕ ಬತ್ತಿ ಹೋಗಬಹುದು ಎನ್ನುವ ಆತಂಕವನ್ನು ಸ್ಥಳೀಯರಾದ ವಿನೋದ್ ಅವರು ಹೊರಹಾಕಿದ್ದಾರೆ. 

ಕೊಡಗಿನಲ್ಲಿ ಮಳೆ ಕೊರತೆಗೆ 5966 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ: ಸಂಕಷ್ಟದಲ್ಲಿ ಅನ್ನದಾತ..!

ಕೇವಲ ಮರ ಕಡಿದು ಸಾಗಿಸುವುದು ಅಷ್ಟೇ ಅಲ್ಲ, ಇದು ಸಂರಕ್ಷಿತ ಅರಣ್ಯವಾಗಿದ್ದರೂ ಇಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶವನ್ನು ಕಡಿದು ಕಾಫಿ ತೋಟಗಳನ್ನಾಗಿ ಮಾಡಿ ಇಡೀ ಪರಿಸರವನ್ನು ನಾಶ ಮಾಡಲಾಗುತ್ತಿದೆ. ತೋಟ ಮಾಡುವುದಕ್ಕೂ ಸ್ಥಳೀಯ ಕೆಲವರು ಮೊದಲು ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿ ಅರಣ್ಯವನ್ನು ಸುಟ್ಟು ಬಯಲು ಪ್ರದೇಶ ಎನ್ನುವಂತೆ ಮಾಡುತ್ತಾರೆ. ನಂತರ ಆ ಪ್ರದೇಶಲ್ಲಿ ತೋಟ ಮಾಡುತ್ತಿದ್ದಾರೆ. ಇದಕ್ಕೂ ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಜನರ ಆಕ್ರೋಶ. ಜೊತೆಗೆ ನಿರಂತರವಾಗಿ ಎಗ್ಗಿಲ್ಲದೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಮಾಹಿತಿಯೂ ಇದೆ. 

ಒಟ್ಟಿನಲ್ಲಿ ಕೊಡಗಿನಲ್ಲಿ ವನ್ಯ ಸಂಪತ್ತು ನಿರಂತರವಾಗಿ ನಾಶವಾಗುತ್ತಿದೆ. ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ.

Follow Us:
Download App:
  • android
  • ios