ಬೆಂಗಳೂರು [ಜು.20]:   ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳಿಂದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಅಧ್ಯಯನ ಕೈಗೊಂಡಿದೆ ಎಂದು ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್‌ಸೋಪ್ ಕಾರ್ಖಾನೆ ಮೆಟ್ರೋ ನಿಲ್ದಾಣದಿಂದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ ಸೇರಿದಂತೆ ತ್ರಿವೇಣಿ ಮುಖ್ಯರಸ್ತೆ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಮೀಪದ ವರೆಗೆ ಸುಮಾರು 1.40 ಕಿ.ಮೀ.ವರೆಗೆ ಸ್ಕೈವಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಈಗಾಗಲೇ ಬಿಎಂಆರ್ ಸಿಎಲ್ ತಜ್ಞರ ತಂಡ ಯೋಜನೆ ಕುರಿತು ಅಧ್ಯಯನ ಆರಂಭಿಸಿದೆ.

ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣದಿಂದ ಯಶವಂತಪುರ ಬಸ್ ನಿಲ್ದಾಣ, ತ್ರಿವೇಣಿ ರಸ್ತೆ ಅಥವಾ ರಾಮಯ್ಯ ರಸ್ತೆ ಕಡೆಗೆ ತೆರಳಲು ಮೆಟ್ರೋ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸಬೇಕಿದೆ. ಅಲ್ಲದೇ ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ತುಮಕೂರು ರಸ್ತೆಯನ್ನು ದಾಟಲು ಪರದಾಡುವ ಸ್ಥಿತಿ ಇದೆ. ಮೆಟ್ರೋ ನಿಲ್ದಾಣದಿಂದ ಯಶವಂತಪುರ ಬಸ್ ನಿಲ್ದಾಣ ತಲುಪಲು ಕನಿಷ್ಠ 30 ನಿಮಿಷಗಳು ಬೇಕು. ಆದ್ದರಿಂದ ಮೆಟ್ರೋದಲ್ಲಿ ಬರುವುದಕ್ಕಿಂತ ಬಸ್, ಆಟೋಗಳಲ್ಲಿ ಬರುವುದು ಉತ್ತಮ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

ಈ ಕಾರಣದಿಂದ ಅನೇಕ ಪ್ರಯಾಣಿಕರು ಮೆಟ್ರೋ ರೈಲನ್ನು ಆವಲಂಬಿಸುವ ಬದಲು ಇತರ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಅದನ್ನು ಮನಗಂಡು ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಯಾಂಡಲ್ ಸೋಪ್ ಕಾರ್ಖಾನೆ ಮೆಟ್ರೋ ನಿಲ್ದಾಣದಿಂದ ಯಶವಂತಪುರ ಬಿಎಂಟಿಸಿ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಒದಗಿಸಲು ಸ್ಕೈವಾಕ್ ನಿರ್ಮಿಸಲು ನಿಗಮ ಯೋಜನೆ ಸಿದ್ಧಪಡಿಸಿದೆ. ಯೋಜನೆಯ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ರೈಲಿನಲ್ಲಿ ಆಗಮಿಸಿ ಪ್ರಯಾಣಿಕರು ಯಶವಂತಪುರ ಬಸ್ ನಿಲ್ದಾಣದ ಜತೆಗೆ ತ್ರಿವೇಣಿ ಮುಖ್ಯ ರಸ್ತೆ ಮತ್ತು ರಾಮಯ್ಯ ರಸ್ತೆಯಲ್ಲಿ ಇಳಿಯಲು ಸ್ಕೈವಾಕ್‌ನಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಮುಂದುವರೆದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ವರೆಗೂ ಯೋಜನೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸ್ಕೈವಾಕ್ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅತ್ಯಂತ ಕಿರಿದಾಗಿದ್ದು, ಶೀಘ್ರವೇ ಕಾರ್ಯ
ಸಾಧ್ಯತಾ ಅಧ್ಯಯನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ವೆ ನಿಲ್ದಾಣಕ್ಕೂ ಮೇಲ್ಸೇತುವೆ: ಯಶವಂತಪುರ ಬಸ್ ನಿಲ್ದಾಣ ಮಾತ್ರವಲ್ಲ ಯಶವಂತಪುರ ರೈಲ್ವೆ ನಿಲ್ದಾಣದ 6 ನೇ ಪ್ಲಾಟ್‌ಫಾರಂಗೆ ಮೆಟ್ರೋ ಪ್ರಯಾಣಿಕರು ಹೋಗಲು-ಬರಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಯಿಂದ ಅನುಮತಿ ಕೋರಲಾಗಿದೆ. ಈ ಯೋಜನೆ ಸಾಕಾರದಿಂದ ಮೆಟ್ರೋ ಪ್ರಯಾಣಿಕರು ಸುಲಭವಾಗಿ ರೈಲ್ವೆ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗಲಿದ್ದು, ಸಮಯದ ಉಳಿತಾಯವೂ ಆಗಲಿದೆ. ಜತೆಗೆ ಮೆಟ್ರೋ ರೈಲಿಗೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆ ಇದೆ. ರೈಲ್ವೆ ಇಲಾಖೆ ಅನುಮತಿ ನೀಡಿದ ಕೂಡಲೇ ಕಾರ್ಯ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧವಿದೆ ಎಂದ ಮೆಟ್ರೊ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.