ಮಧ್ಯಾಹ್ನವಾದರೂ ಕಚೇರಿಗೆ ಬೀಗ ಹಾಕಲಾಗಿತ್ತು. ಅಲ್ಲದೇ, ಫೋನ್‌ ಪೇ ಮೂಲಕ ಸಿಬ್ಬಂದಿಯೊಬ್ಬರು ಲಕ್ಷಾಂತರ ರುಪಾಯಿ ಲೆಕ್ಕವಿಲ್ಲದ ಹಣ ಪಡೆದಿರುವುದು ಕಂಡು ಬಂದಿದೆ. ಇನ್ನುಳಿದಂತೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿರುವುದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆರೋಪಗಳು ಕೇಳಿಬಂದಿವೆ.

ಬೆಂಗಳೂರು(ಜ.21): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ (ಬಿಬಿಎಂಪಿ) ಅವ್ಯವಸ್ಥೆಯನ್ನು ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯು ಇದೀಗ ತೂಕ ಮತ್ತು ಮಾಪನ ಇಲಾಖೆಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದೆ.

ಆಶ್ಚರ್ಯವೆಂದರೆ, ಮಧ್ಯಾಹ್ನವಾದರೂ ಕಚೇರಿಗೆ ಬೀಗ ಹಾಕಲಾಗಿತ್ತು. ಅಲ್ಲದೇ, ಫೋನ್‌ ಪೇ ಮೂಲಕ ಸಿಬ್ಬಂದಿಯೊಬ್ಬರು ಲಕ್ಷಾಂತರ ರುಪಾಯಿ ಲೆಕ್ಕವಿಲ್ಲದ ಹಣ ಪಡೆದಿರುವುದು ಕಂಡು ಬಂದಿದೆ. ಇನ್ನುಳಿದಂತೆ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿರುವುದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆರೋಪಗಳು ಕೇಳಿಬಂದಿವೆ.

Bengaluru: ಬಿಬಿಎಂಪಿ ಮೇಲೆ ಉಪಲೋಕಾಯುಕ್ತ ದಿಢೀರ್‌ ದಾಳಿ; ಅಮ್ಮನ ಬದಲು ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಗ!

ಸೋಮವಾರ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿನ ತೂಕ ಮತ್ತು ಮಾಪನ ಇಲಾಖೆಯ ಕಚೇರಿ ಮೇಲೆ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌, ಉಪಲೋಕಾಯುಕ್ತರಾದ ನ್ಯಾ.ಕೆ.ಎನ್‌.ಫಣೀಂದ್ರ, ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ದಿಢೀರ್‌ ಕಾರ್ಯಾಚರಣೆ ಕೈಗೊಳ್ಳಲಾಯಿತು. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿಯಲ್ಲಿಯೂ ಕಾರ್ಯಾಚರಣೆ ನಡೆಸಲಾಗಿದೆ. 40 ತಂಡಗಳಾಗಿ ಲೋಕಾಯುಕ್ತ ಸಂಸ್ಥೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, 36 ತಂಡಗಳು ಬೆಂಗಳೂರಲ್ಲಿ ಶೋಧ ಕಾರ್ಯ ನಡೆಸಿದರೆ, ಇನ್ನುಳಿದ ನಾಲ್ಕು ತಂಡಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಸಿದೆ.

ಒಂದು ಗಂಟೆಯ ಸುಮಾರಿಗೆ ಲೋಕಾಯುಕ್ತರ ತಂಡವು ತೂಕ ಮತ್ತು ಮಾಪನ ಇಲಾಖೆಯ ಕಚೇರಿಗೆ ದಿಢೀರ್‌ ಭೇಟಿ ನೀಡಿದಾಗ ಮೂರು ಮಹಡಿಯ ಕಚೇರಿಗಳಲ್ಲಿಯೂ ಬೀಗ ಹಾಕಲಾಗಿತ್ತು. ಇದನ್ನು ಕಂಡ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಜ್ಯೋತಿ ಎಂಬುವವರ ಫೋನ್‌ ಪೇ ಪರಿಶೀಲನೆ ನಡೆಸಿದಾಗ ₹50 ಸಾವಿರ, ₹1 ಲಕ್ಷ ಹಣ ಬಂದಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕವಾದ ಮಾಹಿತಿ ನೀಡುವಲ್ಲಿ ಎಡವಿದ್ದಾರೆ. ಆಗ ಜ್ಯೋತಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಇದರ ಜತೆಗೆ ಕಳೆದ ಏಳು ವರ್ಷಗಳಿಂದ ವರ್ಗಾವಣೆಯಾಗದೆ ಒಂದೆಡೆ ಕೆಲಸ ಮಾಡುತ್ತಿರುವ ಬಗ್ಗೆಯೂ ಲೋಕಾಯುಕ್ತರು ಆಶ್ಚರ್ಯ ವ್ಯಕ್ತಪಡಿದರು.

ಮಾಪನ ಇಲಾಖೆಯಲ್ಲಿ ಸಿಬ್ಬಂದಿಯ ಕೆಲಸವೇನು? ಮಾಪನ ಮಾಡಿರುವ ವಸ್ತುಗಳ ಮಾಹಿತಿ, ಯಾವ ವಸ್ತುಗಳನ್ನು ಮಾಪನ ಮಾಡಲಾಗಿದೆ? ಎಷ್ಟು ವಸ್ತುಗಳ ಮಾಪನ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಲೋಕಾಯುಕ್ತರು ಕೇಳಿದ್ದಾರೆ. ಆದರೆ, ಅದಕ್ಕೆಲ್ಲ ನಿಖರವಾದ ಮಾಹಿತಿ ನೀಡುವಲ್ಲಿ ಮಾಪಕ ಅಧಿಕಾರಿಗಳು ಹಿಂದೇಟು ಹಾಕಿದರು. ಅಲ್ಲದೇ, ನಗದು ನೋಂದಣಿ ಪುಸ್ತಕ ಇಲ್ಲದಿರುವುದು, ಪ್ರತಿ ನಿತ್ಯ ಎಷ್ಟು ನಗದು ಬರುತ್ತದೆ ಎಂಬುದರ ಮಾಹಿತಿಯನ್ನು ಉಪಲೋಕಾಯುಕ್ತರು ಕೇಳಿದಾಗ, ಅದಕ್ಕೂ ಸಮರ್ಪಕವಾದ ಉತ್ತರ ನೀಡಲು ಸಾಧ್ಯವಾಗಿಲ್ಲ. ಅಧಿಕಾರಿಗಳ ನಡೆಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಗರಂ ಆದರು.

ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್, ಸ್ವಜನಪಕ್ಷಪಾತ, ಭ್ರಷ್ಟಾಚಾರ ಸೇರಿದಂತೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ತೂಕ ಮತ್ತು ಮಾಪನ ಕಚೇರಿಯ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅವ್ಯವಸ್ಥೆ, ಅಕ್ರಮಗಳ ಕುರಿತು ಸುಮೋಟೋ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಚೇರಿಯು ನಾಲ್ಕು ಮಹಡಿ ಇದ್ದು, ಮೂರು ಮಹಡಿಯಲ್ಲಿನ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಕಚೇರಿಯಲ್ಲಿರುವವರು ಕಾರಣ ಇಲ್ಲದೆ ಹೊರಗಡೆ ಹೋಗಿರುವುದು ಗೊತ್ತಾಗಿದೆ. ಕಚೇರಿಗೆ ಬೀಗ ಹಾಕಿಕೊಂಡು ಹೋಗಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

8 ಅಧಿಕಾರಿಗಳ ಮೇಲೆ ಲೋಕಾ ದಾಳಿ: 21 ಕೋಟಿ ಸಂಪತ್ತು ವಶ

ಶುಕ್ರವಾರದವರೆಗೆ ಕಚೇರಿ ಕೆಲಸ ಇರುತ್ತದೆ. ಯಾರೇ ಹೊರಗಡೆ ಹೋದರೂ ನೋಂದಣಿ ಪುಸ್ತಕ ಇರಬೇಕು ಅಥವಾ ಕಂಟ್ರೋಲರ್‌ಗೆ ಮಾಹಿತಿ ನೀಡಬೇಕು. ಈ ಎರಡನ್ನೂ ಯಾರೂ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಅಲ್ಲದೇ, ಅಕ್ರಮ ಹಣ ವರ್ಗಾವಣೆ ಆಗುತ್ತಿರುವುದು ಗೊತ್ತಾಗಿದೆ. ಒಂದು ವಾರದ ಹಣವನ್ನು ಶೇಖರಿಸಿಕೊಂಡಿದ್ದಾರೆ. ಇದು ಕಾನೂನು ಪ್ರಕಾರ ಸರಿನಾ ಎಂದು ಪ್ರಶ್ನಿಸಲಾಗಿದೆ. ಜನರ ಪರ ಯಾರೂ ಕೆಲಸ ಮಾಡಿಲ್ಲ. ಕಾನೂನು ಪ್ರಕಾರ ಏನು ಮಾಡಲಾಗಿದೆ ಎಂಬುದರ ಮಾಹಿತಿ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಕೆಲವರು ಮೊಬೈಲ್‌ನಲ್ಲಿ ಹಣದ ವಹಿವಾಟು ಮಾಡಿದ್ದಾರೆ. ಒಂದು ಲಕ್ಷ ರು. ವಹಿವಾಟು ಆಗಿದೆ. ಎಲ್ಲದರ ಮಾಹಿತಿಯನ್ನು ಕೇಳಲಾಗಿದೆ. ಇದಲ್ಲದೇ, ಮಂಗಳವಾರ, ಬುಧವಾರ ದಿನದ ಹಾಜರಾತಿ ಹಾಕಲಾಗಿದೆ. ಹಣವೂ ಸಹ ಎರಡು ದಿನದಲ್ಲಿ ಸಂಗ್ರಹಿಸಬೇಕಾದ ಹಣವನ್ನು ಒಂದು ದಿನದಲ್ಲಿ ಸಂಗ್ರಹಿಸಲಾಗಿದೆ. ಈ ಎಲ್ಲದರ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಸಮರ್ಪಕವಾದ ಉತ್ತರ ಬಾರದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.