Asianet Suvarna News Asianet Suvarna News

ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು: ಸಚಿವ ಸಿ.ಟಿ.ರವಿ

ಕೋವಿಡ್‌-19 ನಿಂದಾಗಿ ಜಾಗತಿಕವಾಗಿ ಅನೇಕ ವಲಯಗಳು ನಷ್ಟ ಅನುಭವಿಸಿವೆ. ಅದರಲ್ಲಿ ಪ್ರವಾಸೋದ್ಯಮವು ಕೂಡ ಒಂದಾಗಿದೆ. ಇದರ ಅಭಿವೃದ್ಧಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Locking on Chikkamagaluru Tourism Development Says Minister CT Ravi
Author
Chikkamagaluru, First Published May 27, 2020, 9:28 AM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಮೇ.27): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರವಾಸೋದ್ಯಮ ನೀತಿಗೆ ಪೂರಕವಾಗಿ ಜೂನ್‌ ಅಂತ್ಯದೊಳಗೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲಾಗುವುದು ಎಂದು ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು. ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ನಿಯಮಗಳ ಬಗ್ಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್‌-19 ನಿಂದಾಗಿ ಜಾಗತಿಕವಾಗಿ ಅನೇಕ ವಲಯಗಳು ನಷ್ಟ ಅನುಭವಿಸಿವೆ. ಅದರಲ್ಲಿ ಪ್ರವಾಸೋದ್ಯಮವು ಕೂಡ ಒಂದಾಗಿದೆ. ಇದರ ಅಭಿವೃದ್ಧಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ. ನಮ್ಮ ರಾಜ್ಯ ಹಲವು ವೈವಿಧ್ಯತೆಗೆ ಹೆಸರಾಗಿದ್ದು, ಪ್ರವಾಸೋದ್ಯಮ ಬೆಳವಣಿಗೆಯ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳಿನಿಂದ ಪ್ರವಾಸೋದ್ಯಮ ಕರಡು ರೂಪಿಸಲಾಗುತ್ತಿದ್ದು, ಜೂನ್‌ ಅಂತ್ಯದೊಳಗೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದರು.

ಪ್ರವಾಸೋದ್ಯಮ ಚೇತರಿಕೆ ಉದ್ದೇಶದಿಂದಾಗಿ ಹಲವು ಹಂತಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಆರಂಭದಲ್ಲಿ ಸ್ಥಳೀಯ ಪ್ರವಾಸಿಗರನ್ನು ಆಕರ್ಷಿಸಲು ಸಿಂಗಾಪೂರ್‌ ಮಾದರಿಯಂತೆ ‘ಲವ್‌ ಯುವರ್‌ ನೇಟಿವ್‌’ ಅಳವಡಿಸುವುದು, ಈ ಮೂಲಕ ಸ್ಥಳೀಯರು ಪ್ರವಾಸಿ ತಾಣಗಳನ್ನು ನೋಡಲು ಅನುಕೂಲ ಮಾಡಿಕೊಡುವುದು, ಬಳಿಕ ಮತ್ತೊಂದು ಹಂತದಲ್ಲಿ ‘ನೋಡು ಬಾ ನಮ್ಮೂರ’ ಹೆಸರಿನಲ್ಲಿ ಜಿಲ್ಲಾ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವುದು. ಅಲ್ಲದೇ ಬೇರೆ ರಾಜ್ಯದ ಪ್ರವಾಸಿಗರಿಗೆ ನಮ್ಮ ರಾಜ್ಯ ಸುರಕ್ಷತೆಯಿಂದ ಕೂಡಿರುವ ಬಗ್ಗೆ ಜಾಗೃತಿ ಮೂಡಿಸುವುದು, ಬಳಿಕ ಅಂತರ ರಾಷ್ಟ್ರೀಯ ಪ್ರವಾಸಿಗರನ್ನು ಹಂತ ಹಂತವಾಗಿ ರಾಜ್ಯದ ಪ್ರವಾಸಕ್ಕೆ ಸೆಳೆಯುವಂತೆ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಪ್ರಾಕೃತಿಕ ಸಂಪತ್ತು ಉಳಿಯಬೇಕು ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಯತ್ತ ಸಾಗುವಂತೆ ಮಾಡಲು ಸಮತೋಲನ ಕಾಪಾಡುವುದರೊಂದಿಗೆ ಪ್ರವಾಸಿ ನಿಯಮಗಳನ್ನು ಜಾರಿಗೆ ತರಲಾಗುವುದು. ಪ್ರತಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿಗಳ ಮುಖ್ಯಸ್ಥಿಕೆಯಲ್ಲಿ ಜಿಲ್ಲಾ ಪ್ರವಾಸಿ ನಿಯಮಗಳನ್ನು ರೂಪಿಸಿ ರಾಜ್ಯದಲ್ಲಿ ಪ್ರವಾಸೋದ್ಯಮ ಚೇತರಿಕೆಗೆ ಕ್ರಮಕೈಗೊಳ್ಳಲಾಗುವುದು. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಹೋಂ ಸ್ಟೇ ಜೊತೆಗೆ ಮೂಲ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಮತ್ತು ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ ಮುಕ್ತವಾಗುವಂತೆ ನಿಯಮ ರೂಪಿಸಿ ಪ್ಲಾಸ್ಟಿಕ್‌ ಮರುಬಳಕೆಯ ಘಟಕಗಳನ್ನು ಸ್ಥಾಪಿಸುವಂತೆ ತಿಳಿಸಿದರು.

ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ

ಜಿಲ್ಲೆಯ ಪ್ರಮುಖ ತಾಣಗಳ ಬಗ್ಗೆ ಮಾಹಿತಿ ಒದಗಿಸಿ ಪ್ರಚಾರ ನೀಡಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಾಹಸ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವ ಕುರಿತು ನೀತಿಯಲ್ಲಿ ಯೋಜನೆ ರೂಪಿಸಲು ಕ್ರಮ ವಹಿಸಲಿದೆ. ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಹಾಗೂ ಪ್ರವಾಸೋದ್ಯಮಕ್ಕೆ ಆದಾಯ ಬರಲು ಅನುಕೂಲವಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಹೋಟೆಲ್‌, ಹೋಮ್‌ ಸ್ಟೇ, ಅಡ್ವೆಂಚರ್‌ ಕ್ಲಬ್‌ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮಾತನಾಡಿ, ಜಿಲ್ಲೆಯ ಚೆಕ್‌ ಪೋಸ್ಟ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸಿಗಬೇಕು ನೋಡಿಕೊಳ್ಳಬೇಕು ಮತ್ತು ಎಲ್ಲ ಹೋಮ್‌ ಸ್ಟೇಗಳಲ್ಲಿ ಏಕ ರೀತಿಯ ತೆರಿಗೆ ನಿಯಮ ರೂಪಿಸುವುದಲ್ಲದೇ, ಕಾಫಿ ಮ್ಯೂಸಿಯಂ ಎಲ್ಲ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಮಾಡಬೇಕು, ತಾಣಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಾರ್ಗದರ್ಶಕರು ಇರುವಂತೆ ನೋಡಿಕೊಳ್ಳುವುದು ಮತ್ತು ಮುಖ್ಯ ನಿಲ್ದಾಣಗಳಲ್ಲಿ ಪ್ರವಾಸಿ ತಾಣಗಳ ಪ್ರದರ್ಶನ ಫಲಕಗಳನ್ನು ಅಳವಡಿಸಿ ಮಾಹಿತಿ ಸಿಗುವಂತೆ ಮಾಡಬೇಕು. ಜೊತೆಗೆ ಸರ್ಕಾರದ ನಿಯಮದಂತೆ ಸ್ವಂತ ಜಾಗದಲ್ಲಿ ಕ್ಯಾರವಾನ್‌ ಪಾರ್ಕಿಂಗ್‌ ಸ್ಥಾಪಿಸಲು ಅನುಮತಿ ನೀಡಬೇಕು ಬಯಲುಸೀಮೆ ಭಾಗದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ವಹಿಸಬೇಕು, ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯ ಸೇರಿದಂತೆ ಇತರೇ ಯೋಜನಾ ಕ್ರಮಗಳು ಜಿಲ್ಲೆಯ ಪ್ರವಾಸೋದ್ಯಮ ನೀತಿಯಲ್ಲಿ ಇರುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಪಂ ಸಿಇಒ ಎಸ್‌.ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios