ಮಂಗಳೂರು(ಜು.16): ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಬುಧವಾರ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್‌ ಆರಂಭಗೊಂಡಿದೆ. ಇದು ಜು.23ರ ಬೆಳಗ್ಗೆ 5 ಗಂಟೆ ವರೆಗೆ ಮುಂದುವರಿಯಲಿದೆ. ಆದರೆ ದಿನಂಪ್ರತಿ ಬೆಳಗ್ಗೆ 8ರಿಂದ 11 ಗಂಟೆ ವರೆಗೆ 3 ಗಂಟೆ ಕಾಲ ಅಗತ್ಯ ವಸ್ತು ಖರೀದಿಗೆ ನಾಗರಿಕರಿಗೆ ಲಾಕ್ಡೌನ್‌ನಿಂದ ವಿನಾಯ್ತಿ ನೀಡಲಾಗಿದೆ.

ಈ ಮಧ್ಯೆ ಬಸ್‌ಗಳ ಓಡಾಟಕ್ಕೆ ನಿರ್ಬಂಧ ವಿ​ಧಿಸಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಒಂದು ವಾರಗಳ ಕಾಲ ಖಾಸಗಿ ಬಸ್‌ ಸಂಚಾರವೂ ಇರುವುದಿಲ್ಲ ಎಂದು ದ.ಕ.ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ತಿಳಿಸಿದ್ದಾರೆ. ಖಾಸಗಿ ಬಸ್‌ಗಳಲ್ಲದೆ ಸರ್ಕಾರಿ ಬಸ್‌ಗಳು ಕೂಡ ರಸ್ತೆಗೆ ಇಳಿಯುವುದಿಲ್ಲ. ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇ​ಧಿಸಲಾಗಿದೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚಲಿದ್ದು, ಕಂಟೈನ್‌ಮೆಂಟ್‌ ವಲಯಗಳು ಸಂಪೂರ್ಣ ಬಂದ್‌ ಆಗಿರುತ್ತದೆ. ಬಾರ್‌, ಮಾಲ್‌, ವೈನ್‌ಶಾಪ್‌ಗಳು ಸಂಪೂರ್ಣ ಬಂದ್‌ ಆಗಿದ್ದು, ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳೂ ಬಂದ್‌ ಆಗಿರುತ್ತವೆ.

ನೋಂದಣಿ ಸಂಖ್ಯೆಗೆ ಕಾಯ್ಬೇಕಿಲ್ಲ, ನೇರವಾಗಿಚಿಕಿತ್ಸೆ ಪಡೆಯಲು ಆಯುಕ್ತರ ಸೂಚನೆ

ಜಿಮ್ನೇಶಿಯಂಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್‌ಗಳು ಹಾಗೂ ಆಡಿಟೋರಿಯಂಗಳು, ಸಭಾ ಭವನಗಳು, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಸಭೆಗಳು ಎಲ್ಲ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಇವುಗಳಿಗೆ ಮಾತ್ರ ಸೀಮಿತ ವಿನಾಯ್ತಿ

ಬೆಳಗ್ಗೆ 8ರಿಂದ ಮಧ್ಯಾಹ್ನ 11ರವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ಧವಸ ಧಾನ್ಯಗಳು, ಹಣ್ಣು ತರಕಾರಿ, ಮಾಂಸದ ಅಂಗಡಿಗಳಲ್ಲಿ ಖರೀದಿಗೆ ವಿನಾಯಿತಿ ಇದೆ. ಪತ್ರಿಕೆ ಹಾಗೂ ಮೆಡಿಕಲ್‌ ಶಾಪ್‌ಗಳಿಗೂ ಇದು ಅನ್ವಯವಾಗುತ್ತದೆ. ಈ ಎಲ್ಲ ಕಾರ್ಯಗಳನ್ನು ಕೋವಿಡ್‌ ಕೋವಿಡ್‌ 19 ನಿರ್ವಹಣೆಗಾಗಿರುವ ನಿಯಗಳನ್ನು ಅನುಸರಿಸಿ ನಡೆಸಬೇಕು ಎಂದು ಜಿಲ್ಲಾ​ಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ಪ್ರತ್ಯೇಕ ವಾಹನ ವ್ಯವಸ್ಥೆ ಇಲ್ಲ

ಜಿಲ್ಲೆಯಲ್ಲಿ ಲಾಕ್ಡೌನ್‌ ಘೋಷಿಸಿದರೂ ಅಗತ್ಯ ಸರ್ಕಾರಿ ಸೇವೆಗಳಿಗೆ ಇದರಿಂದ ವಿನಾಯ್ತಿ ಇಲ್ಲ. ಹಾಗಾಗಿ ಅಂತಹ ಸರ್ಕಾರಿ ನೌಕರರು ಕಚೇರಿಗೆ ಆಗಮಿಸಲೇ ಬೇಕಾಗಿದೆ. ಆದರೆ ಸ್ವಂತ ವಾಹನ ಇಲ್ಲದೆ ಬಸ್‌ಗಳಲ್ಲಿ ಆಗಮಿಸುವವರಿಗೆ ಈ ಬಾರಿ ತೊಂದರೆಯಾಗಲಿದೆ. ಅಂತಹವರು ಕಚೇರಿಗೆ ಬಂದುಹೋಗಲು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಇಲ್ಲ.

ದೇಶದಲ್ಲಿ ಒಂದೇ ದಿನ ದಾಖಲೆಯ 32672 ಕೇಸು, 603 ಸಾವು!

ಆರೋಗ್ಯ ಇಲಾಖೆಯ ಅಂಧತ್ವ ಕಾರ್ಯಕ್ರಮಕ್ಕೆ ಮೀಸಲಾದ 35 ಸೀಟಿನ ಬಸ್‌ನ್ನು ಮಂಗಳೂರು ನಗರ ಪ್ರದೇಶದ ಆರೋಗ್ಯ ಇಲಾಖೆ ಸಿಬ್ಬಂದಿ ಸಂಚಾರಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಬಂಟ್ವಾಳ, ಬಿ.ಸಿ.ರೋಡ್‌, ಪುತ್ತೂರು ಮುಂತಾದ ಕಡೆಗಳಿಂದ ಆಗಮಿಸುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಕಳೆದ ಬಾರಿ ಲಾಕ್ಡೌನ್‌ ಆಗಿದ್ದಾಗ ಇಲ್ಲಿಂದ ಎರಡು ಕೋವಿಡ್‌ ಬಸ್‌ ಸಂಚಾರ ಏರ್ಪಡಿಸಲಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಪ್ರಸ್ತಾಪ ಆರೋಗ್ಯ ಇಲಾಖೆಯ ಮುಂದಿಲ್ಲ. ಆರೋಗ್ಯ ಸಿಬ್ಬಂದಿ ಅಲ್ಲಲ್ಲೇ ಲಭ್ಯವಿರುವ ವಾಹನ ವ್ಯವಸ್ಥೆಯನ್ನು ಮಾಡಿಕೊಂಡು ಬರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಂದಾಯವೇ ಮೊದಲಾದ ಇತರೆ ಅಗತ್ಯ ಸೇವೆಯ ಇಲಾಖೆಗಳ ಸಿಬ್ಬಂದಿ ಮಾತ್ರ ವಾಹನ ಇಲ್ಲದೆ ಪಡಿಪಾಟಲು ಪಡುವಂತಾಗಿದೆ.

ಪ್ರತ್ಯೇಕ ಪಾಸ್‌ ಇಲ್ಲ

ಕಳೆದ ಸಲ ಲಾಕ್ಡೌನ್‌ ಸಂದರ್ಭ ತುರ್ತು ಸೇವೆಗಳಿಗೆ ಜಿಲ್ಲಾಡಳಿತ ಪ್ರತ್ಯೇಕ ಕೋವಿಡ್‌ ಪಾಸ್‌ ವಿತರಿಸಿತ್ತು. ಆದರೆ ಈ ಬಾರಿ ಸರ್ಕಾರಿ ನೌಕರರಿಗೆ ಅವರದೇ ಇಲಾಖೆಯ ಗುರುತಿನ ಚೀಟಿಯೇ ಪಾಸ್‌. ಹಾಗಾಗಿ ಪ್ರತ್ಯೇಕ ಪಾಸ್‌ ವಿತರಣೆ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಮಾಧ್ಯಮ ಮಂದಿ ಕೂಡ ತಮ್ಮ ಸಂಸ್ಥೆಯ ಗುರುತಿನ ಚೀಟಿ ತೋರಿಸಿದರೆ ಸಾಕಾಗುತ್ತದೆ. ಒಂದು ವಾರದ ಲಾಕ್ಡೌನ್‌ ಹಾಗೂ ಆದಷ್ಟುಮಂದಿ ಮನೆಯಲ್ಲೇ ಇರುವಂತೆ ಮಾಡಲು ಪ್ರತ್ಯೇಕ ಪಾಸ್‌ನ್ನು ನಿಗದಿಪಡಿಸಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ರಸ್ತೆಗಿಳಿದರೆ ಬಿಗು ಕ್ರಮ

ಕಳೆದ ಲಾಕ್ಡೌನ್‌ಗಿಂತ ಈ ಬಾರಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಿದೆ. ವಿನಾಯ್ತಿ ಅವಧಿ ಹಾಗೂ ಲಾಕ್ಡೌನ್‌ ಸಮಯದಲ್ಲಿ ಅನಗತ್ಯವಾಗಿ ರಸ್ತೆಗೆ ಇಳಿದರೆ ಪೊಲೀಸರು ಬಿಗು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಈ ಕುರಿತು ಸರ್ಕಾರದಿಂದಲೇ ಸೂಚನೆ ಬಂದಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.