ಬೆಂಗಳೂರು(ಜು.16): ಕೊರೋನಾ ಸೋಂಕಿನ ಲಕ್ಷಣ ಇರುವವರು ಸೋಂಕು ಪರೀಕ್ಷೆ ಮಾಡಿಸಿಕೊಂಡು ನೋಂದಣಿ ಸಂಖ್ಯೆ (ಬೆಂಗಳೂರು ನಗರ ಕೋಡ್‌) ಬರುವವರೆಗೆ ಕಾಯಬೇಕಾಗಿಲ್ಲ. ಇನ್ನು ಮುಂದೆ ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ರೋಗಿಗಳು ಸೋಂಕು ಪರೀಕ್ಷೆಗೆ ಮಾಡಿಸಿಕೊಂಡು ಅದರ ಫಲಿತಾಂಶ ಬರುವವರೆಗೆ ಕಾಯದೇ ನೇರವಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದಾಗಿದೆ.

ದೇಶದಲ್ಲಿ ಒಂದೇ ದಿನ ದಾಖಲೆಯ 32672 ಕೇಸು, 603 ಸಾವು!

ಒಂದು ವೇಳೆ ಕೊರೋನಾ ಸೋಂಕು ದೃಢಪಟ್ಟಬಳಿಕ ನೋಂದಣಿ ಸಂಖ್ಯೆ ಲಭ್ಯವಾಗದಿದ್ದರೂ ನೇರವಾಗಿ ಹೋಗಿ ಆಸ್ಪತ್ರೆಗೆ ದಾಖಲಾಗಬಹುದಾಗಿದೆ. ಈ ಕುರಿತು ಈಗಾಗಲೇ ನಗರದ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ನಗರದಲ್ಲಿ ಫೀವರ್‌ ಕ್ಲಿನಿಕ್‌ಗಳಲ್ಲಿ ಸೋಂಕಿನ ಲಕ್ಷಣ ಇರುವವರಿಗೆ ಗಂಟಲ ದ್ರವದ ಪರೀಕ್ಷೆ ನಿಲ್ಲಿಸಿಲ್ಲ. ಎಂದಿನಂತೆ ಸೋಂಕು ಪರೀಕ್ಷೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.