ರುದ್ರಪ್ಪ ಆಸಂಗಿ 

ವಿಜಯಪುರ(ಜ.15): ಎತ್ತ ನೋಡಿದರೂ ರಾಸುಗಳು....ಯಾವ ಕಡೆ ಆಲಿಸಿದರೂ ದನಗಳ ಗೆಜ್ಜೆನಾದ....ರಸ್ತೆಗಳಲ್ಲಿ ರಾಸುಗಳ ಸಂದಣಿ... ಇದು ಉತ್ತರ ಕರ್ನಾಟಕದ ಬೃಹತ್ ಜಾನುವಾರು ಜಾತ್ರೆ ಹೆಗ್ಗಳಿಕೆ ಪಾತ್ರವಾದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಕಂಡು ಬರುತ್ತಿರುವ ದೃಶ್ಯ. 

ವಿಜಯಪುರದ ಹೊರ ವಲಯ ತೊರವಿ ಬಳಿ ಜಾನುವಾರು ಜಾತ್ರೆ ನಡೆದಿದೆ. ಸಹಸ್ರ ಸಂಖ್ಯೆಯಲ್ಲಿ ರೈತರು, ಜಾನುವಾರು ಜಮಾಯಿಸಿದ್ದು, ಕಣ್ಣು ಹಾಯಿಸಿದಷ್ಟು ಒಂದಕ್ಕಿಂತ ಒಂದು ಚೆಂದ. ಸದೃಢ ಮೈಕಟ್ಟು, ದಷ್ಟಪುಷ್ಟ ದೇಹ ಹೊಂದಿದ ರಾಸುಗಳೇ ಗೋಚರಿಸಿದವು. ಕಿಲಾರಿ ತಳಿಯ ದೇಸಿ ರಾಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದವು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಜಯಪುರ ಎಪಿಎಂಸಿಯ 110 ಎಕರೆ ಪ್ರದೇಶ ಸಾಲದೆ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಜಾಗದಲ್ಲೂ ಮೇಳೈಸಿದ್ದವು. ಸಹಸ್ರ ಸಂಖ್ಯೆಯ ದನಗಳು ವಿಶ್ವವಿದ್ಯಾಲಯ ಆವರಣದೊಳಗೆ ಆಸರೆ ಪಡೆದಿವೆ. ಈ ಬಾರಿ ಉತ್ತಮ ಮಳೆ, ಬೆಳೆ ಬಂದಿದ್ದರಿಂದ ಈ ಬಾರಿ ಜಾತ್ರೆ ರಂಗೇರಿತ್ತು. ಕಳೆದ ವರ್ಷ ಬರಗಾಲದಿಂದ ನೀರಿಗಾಗಿ ಪರದಾಟ ನಡೆಸಿದ್ದ ಸಮಯದಲ್ಲಿ ರೈತರಿಗೆ ದನಗಳನ್ನು ಸಾಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿಂಗಾರು ಹಂಗಾಮಿಗೆ ಮಳೆ ಸಮೃದ್ಧವಾಗಿದ್ದು, ರೈತರು ದನಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಕಣ್ಣು ಹಾಯಿಸಿದೆಡೆ ಮಾರಾಟಗಾರರು, ಖರೀದಿದಾರರ ಕೈಯಲ್ಲಿ ರಾಸು ರಾರಾಜಿಸಿದವು.

ಜೋಡೆತ್ತಿಗೆ ಬೇಡಿಕೆ: 

ಶ್ರೀಮಂತ ರೈತರ ಬ್ರಾಂಡ್ ಎಂದೇ ಪ್ರಖ್ಯಾತವಾಗಿರುವ ಹಳ್ಳಿಕಾರ್ ರಾಸುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ. 50 ಸಾವಿರಗಳಿಂದ ಆರಂಭವಾಗಿ 2.30 ಲಕ್ಷ ವರೆಗೆ ಹಳ್ಳಿಕಾರ್ ಜೋಡಿ ರಾಸುಗಳು ಈವರೆಗೆ ಮಾರಾಟವಾಗಿವೆ. ಶ್ರೀಮಂತ ರೈತರು ತಮ್ಮ ಪ್ರತಿಷ್ಠೆಗಾಗಿ ಜಾತ್ರೆಯ ಪ್ರಮುಖ ಬೀದಿಗಳಲ್ಲಿ ಸಾವಿರಾರು ರು. ಖರ್ಚು ಮಾಡಿ ತಮಟೆ, ಬಾರಿಸಿಕೊಂಡು ತಮ್ಮ ರಾಸುಗಳನ್ನು ಮೆರವಣಿಗೆ ಮಾಡುತ್ತಾರೆ. ಜಾತ್ರೆ ಆವರಣದಲ್ಲಿ ಬಣ್ಣ, ಬಣ್ಣದ ದೀಪಾಲಂಕಾರದೊಂದಿಗೆ ಅಲಂಕರಿಸಿದ ಚಪ್ಪರಗಳಲ್ಲಿ ವಿಶೇಷ ರಾಸುಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದು, ಜಾತ್ರೆಗೆ ಬರುವ ಜನರು ಈ ರಾಸುಗಳಿಗೆ ಮನ ಸೋಲುತ್ತಿದ್ದಾರೆ. 

ರಾಜ್ಯದ ನಾನಾ ಕಡೆಯಿಂದ ಭಾಗಿ: 

ಇತಿಹಾಸವಿರುವ ಸಿದ್ಧೇಶ್ವರ ಜಾನುವಾರು ದನಗಳ ಜಾತ್ರೆಗೆ ಮಹಾರಾಷ್ಟ್ರದ ಜತ್ತ, ಸಾಂಗಲಿ, ಮಿರಜ, ಸೊಲ್ಲಾಪುರ ಮುಂತಾದ ಭಾಗದ ಲಕ್ಷಾಂತರ ರೈತರು ಆಗಮಿಸಿ ನಾನಾ ತಳಿಗಳ ರಾಸುಗಳನ್ನು ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ನಡೆಸುತ್ತಾರೆ. ಈ ಬಾರಿ ರಾಸುಗಳ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ನಿತ್ಯ ಕೋಟಿ ರು. ವಹಿವಾಟು ಮೀರುತ್ತಿದೆ. 

ರಾಸುಗಳ ಅಲಂಕಾರ ಸಾಮಗ್ರಿ: 

ರಾಸುಗಳ ಅಲಂಕಾರ ಸಾಮಗ್ರಿ, ಕೃಷಿ ಉಪಕರಣಗಳು, ಒಕ್ಕಲುತನಕ್ಕೆ ಪೂರಕವಾದ ಪರಿಕರಗಳನ್ನೊಳಗೊಂಡ 40 ಕ್ಕೂ ಹೆಚ್ಚು ಅಂಗಡಿಗಳು ಜಾತ್ರಾ ಬೀದಿಯ ಎರಡೂ ಕಡೆ ತೆರೆದು ತಮ್ಮ ವಹಿವಾಟು ನಡೆಸಿವೆ. ಅಲ್ಲಲ್ಲೇ ರೈತರ ಹಸಿವು ತಣಿಸಲು ಹೋಟೆಲ್‌ಗಳು ಇವೆ. ಕಬ್ಬಿನ ಹಾಲಿನ ವಾಹನಗಳಿಗೆ ಲೆಕ್ಕವಿಲ್ಲ.

ಈ ಜಾತ್ರೆಗೆ 10 ವರ್ಷಗಳಿಂದ ಬರುತ್ತಿದ್ದು, ಈ ಹಿಂದಿನ ಜಾತ್ರೆಗಿಂತ ಈ ಬಾರಿ ಜಾತ್ರೆಗೆ ರಾಸುಗಳ ಸಂಖ್ಯೆ ಹೆಚ್ಚಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ. ಈಗಾಗಲೇ ಅರ್ಧ ಭಾಗದ ರಾಸುಗಳು ವ್ಯಾಪಾರವಾಗಿವೆ ಎಂದು ರೈತ ನಿಂಗಪ್ಪ ಬಿರಾದಾರ ಕಾಖಂಡಕಿ ಹೇಳಿದ್ದಾರೆ. 

ಗಮನ ಸೆಳೆದ ಡಿಸಿಎಂ ಆಕಳು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕಾಂಕ್ರೆಜ್ ಆಕಳು ಜಾತ್ರೆಗೆ ಈ ಬಾರಿ ಆಕರ್ಷಣೆ. ಕಾರಜೋಳ ಪುತ್ರ ಉಮೇಶ ಗುಜರಾತ್‌ನಿಂದ ತರಿಸಿದ ಕಾಂಕ್ರೆಜ್ ತಳಿಯ ಆಕಳು ಹಾಗೂ ಹೋರಿ ವಿಜಯಪುರ ಜಿಲ್ಲೆ ಅಪರೂಪದ ತಳಿಯಾಗಿದ್ದು, ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ 5 ಲೀಟರ್ ಹಾಲು ಕೊಡುವ ಈ ಆಕಳು ಆಕರ್ಷಕವಾಗಿವೆ. ಆಕಳಿಗೆ 1.5 ಲಕ್ಷ ಹಾಗೂ ಹೋರಿಗೆ 2 ಲಕ್ಷ ದರ ನಿಗದಿಗೊಳಿಸಲಾಗಿದೆ. ಕಾಂಕ್ರೆಜ್ ತಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಆಕಳು, ಹೋರಿ ನೋಡಲು ರೈತರು ವಾಹನಗಳಲ್ಲಿ ಬರುತ್ತಿದ್ದಾರೆ.