ಶಿವಮೊಗ್ಗ(ಜು.19): ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಸ ಎಸೆಯುವುದು ಕಂಡು ಬಂದಲ್ಲಿ ಕನಿಷ್ಠ 500ರು ನಿಂದ ಗರಿಷ್ಠ ದಂಡ ವಿಧಿಸಲಾಗುತ್ತದೆ ಎಂದು ಪೌರಾಯುಕ್ತ ಎಸ್‌.ರಾಜು ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಎಸ್‌.ಎನ್‌.ನಗರದಲ್ಲಿ ಗುರುವಾರ ನಗರಸಭೆಯಿಂದ ಮನೆಮನೆ ಕಸ ಸಂಗ್ರಹಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಪರಿಸರ ನೈರ್ಮಲ್ಯ ಉಂಟಾಗುತ್ತಿದೆ. ಈ ಬಗ್ಗೆ ನಗರಸಭೆ ಸಾಕಷ್ಟುಜಾಗೃತಿ ಮೂಡಿಸಿದರೂ ಜನ ಜಾಗೃತಿಗೊಂಡಿಲ್ಲ. ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಕಾನೂನಿನಡಿ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ನಗರದ 31 ವಾರ್ಡ್‌ನಲ್ಲೂ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ 2 ಆಟೋ ಟಿಪ್ಪರ್ ಖರೀದಿ:

ಪಟ್ಟಣದಲ್ಲಿ ಜನಸಂಖ್ಯೆ ಬೆಳೆಯುತ್ತಿದೆ. ಹಿಂದೆ 100 ಜನ ಪೌರ ಕಾರ್ಮಿಕರು ಇದ್ದರು. ಈಗ 82 ಪೌರ ಕಾರ್ಮಿಕರು ಮಾತ್ರ ಇದ್ದಾರೆ. 18 ಜನರ ಕೊರತೆ ಇದೆ. ಆದರೂ ನೈರ್ಮಲ್ಯ ಕೆಲಸಕ್ಕೆ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ. 14 ಆಟೋ ಟಿಪ್ಪರ್‌ ಮೂಲಕ ಕಸ ಸಂಗ್ರಹ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಇನ್ನೆರಡು ಆಟೋ ಟಿಪ್ಪರ್‌ ಖರೀದಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಹಾಲು ಖರೀದಿಸಿ ಪ್ಯಾಕ್‌ ಮರಳಿಸಿ ಹಣ ಪಡೆಯಿರಿ

ಕಳೆದ ಜನವರಿ ತಿಂಗಳಿನಿಂದ ನಗರವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದೆ. ಜನವರಿಯಿಂದ ಜೂನ್‌ವರೆಗೆ 4 ಟನ್‌ ಪ್ಲಾಸ್ಟಿಕ್‌ ಸೀಜ್‌ ಮಾಡಲಾಗಿದ್ದು, ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೂ, ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಮುಕ್ತ ಸಾಗರ ನಗರವನ್ನು ರೂಪಿಸುವ ನಿಟ್ಟಿನಲ್ಲಿ ಜು.20ರಂದು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವರ್ತಕರ ಸಭೆ ಕರೆದು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಪರಿಸರ ಅಭಿಯಂತರ ಪ್ರಭಾಕರ್‌, ಹಿರಿಯ ಆರೋಗ್ಯ ನಿರೀಕ್ಷಕರಾದ ಶೈಲೇಶ್‌, ರಚನಾ, ಪ್ರವೀಣ್‌ ಹಾಜರಿದ್ದರು.