ಚಿಕ್ಕನಾಯಕನಹಳ್ಳಿ [ಸೆ.19] :  ತಾಲೂಕಿನ ಐತಿಹಾಸಿಕ ಹಾಗೂ ಲಕ್ಷಾಂತರ ಭಕ್ತರು ಸೇರುವ ದೊಡ್ಡರಾಂಪುರ ಮಾರಿ ಜಾತ್ರೆಗೆ ಯಾವುದೆ ವಿಘ್ನಗಳು ಬರಬಾರದಂತೆ ನೋಡಿಕೊಳ್ಳಬೇಕು ಎಂದು ಜ್ಲಿಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.

ಅವರು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಜಾತ್ರೆ ಪ್ರಯುಕ್ತ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೀರ್ಥಪುರ ಗ್ರಾಪಂ ಮಾಜಿ ಅಧ್ಯಕ್ಷ ಲಿಂಗರಾಜು ಮಾತನಾಡಿ, ಜಾತ್ರೆ ನಡೆಯುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಲೇರಿಯಾ ಸೋಂಕು ತಗುಲಿದೆ. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲೂಕಿನಲ್ಲಿ ಎಲ್ಲಿಯೂ ಮಲೇರಿಯಾ ಪ್ರಕರಣ ದಾಖಲೆಯಾಗಿಲ ್ಲ ಎಂದರು. ಆದರೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಫಾಗಿಂಗ್‌ ಮಾಡಿಸಿ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ ಗ್ರಾಮದ ಪಕ್ಕದಲ್ಲಿರುವ ತಿಪ್ಪೆಗಳನ್ನು ಸಹ ಖಾಲಿ ಮಾಡಿಸಿ ಎಂದು ಸಚಿವರು ಸೂಚಿಸಿದರು.

ಉತ್ತರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮಗಳಲ್ಲಿರುವ ಎಲ್ಲಾ ಚರಂಡಿಗಳು ಒತ್ತುವರಿಯಾಗಿರುವುದರಿಂದ ಸ್ವಚ್ಛಗೊಳಿಸಲು ಬಹಳ ಸಮಸ್ಯೆಯಾಗಿದೆ. ಪ್ರತಿ ಮನೆಯವರು ಶೌಚಾಲಯಗಳನ್ನು ಚರಂಡಿಯ ಮೇಲೆ ನಿರ್ಮಿಸಿದ್ದಾರೆ. ಯಾರು ಸಹ ಒತ್ತುವರಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಸಾರ್ವಜನಿಕರು ತಮ್ಮ ಶೌಚಾಲಯಗಳನ್ನು ತೆರವುಗೊಳಿಸಿದರೆ ಮಾತ್ರ ಚರಂಡಿ ಸ್ವಚ್ಛಗೊಳಿಸ ಬಹುದು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ನಿಮಗೆ ತಾಲೂಕು ಆಡಳಿತದಿಂದ ಸಂಪೂರ್ಣ ಸಹಕಾರವಿದೆ. ತಹಸೀಲ್ದಾರ್‌ ಪೊಲೀಸ್‌ ಬಂದೋಬಸ್ತ್ ಒದಗಿಸುತ್ತಾರೆ. ಗ್ರಾಮ ಪಂಚಾಯಿತಿಗೆ ತೆರವುಗೊಳಿಸುವ ಇಚ್ಛಾಶಕ್ತಿಯಿದ್ದರೆ ಕ್ರಮ ಜರುಗಿಸಿ. ನಿಮ್ಮ ತೀರ್ಮಾನಕ್ಕೆ ನಾವು ಅಡ್ಡಿ ಬರುವುದಿಲ್ಲ ಎಂದರು.

ಮದ್ಯ ಮಾರಾಟ ನಿಷೇಧಿಸಿ:

ಜಾತ್ರೆ ಸಮಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಅಹವಾಲು ಇತ್ತಾಗ, ಸಚಿವರು ಅಬಕಾರಿ ಇಲಾಖೆಯವರಿಗೆ ಯಾವುದೆ ಕಾರಣಕ್ಕೂ ಜಾತ್ರೆ ಸಂದರ್ಭದಲ್ಲಿ ಒಂದು ಬಾಟಲಿ ಮದ್ಯ ಅಲ್ಲಿಗೆ ಸರಬರಾಜಾಗಬಾರದು. ಗುಬ್ಬಿ ಮತ್ತು ಚಿ.ನಾ.ಹಳ್ಳಿಯಿಂದ ಮದ್ಯ ಸರಬರಾಜಾಗದಂತೆ ಎಚ್ಚರ ವಹಿಸಿ. ತಾಲೂಕಿನಲ್ಲಿ ಮೂರು ದಿನ ಮದ್ಯ ಮಾರಾಟ ಮಾಡದಂತೆ ಅಂಗಡಿಗಳನ್ನು ಬಂದ್‌ ಮಾಡಿಸಿ. ಯಾವ ದಿಕ್ಕಿನಿಂದಲೂ ಮದ್ಯ ಸಿಗದಂತೆ ಕಾವಲು ಹಾಕಿ. ಯಾರ ಬಳಿಯಾದರೂ ಒಂದು ಬಾಟಲಿ ಮದ್ಯ ಸಿಕ್ಕಿದರೂ ಹತ್ತು ಬಾಟಲಿಗೆ ಕೇಸು ಹಾಕಿ. ನಾನು ನಿಮಗೆ ಅಂತಿಮ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಸಭೆಗೆ ಪೊಲೀಸ್‌ ಉಪಾಧೀಕ್ಷರನ್ನು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದ ಸಚಿವರು, ಮತ್ತೊಮ್ಮೆ ಅವರನ್ನು ಕರೆಸಿ ಸಭೆ ಮಾಡೋಣ. ಪೊಲೀಸ್‌ ಬಂದೋಬಸ್ತ್ ಹೆಚ್ಚು ಮಾಡಬೇಕು. ಟ್ರಾಫಿಕ್‌ ಜಾಮ್‌ ಆಗದಂತೆ ಪೊಲೀಸ್‌ ಇಲಾಖೆ ಎಚ್ಚರ ವಹಿಸಬೇಕು. ಸರಗಳ್ಳತನ, ಪುಂಡರ ಹಾವಳಿ ಸೇರಿ ಅಹಿತಕರ ಘಟನೆಗಳು ಜರುಗದಂತೆ ನಿಗಾಯಿಡಿ ಎಂದರು.

ಅಗ್ನಿಶಾಮಕ ದಳದವರು ಯಾವುದೇ ಶುಲ್ಕ ವಿಧಿಸದಂತೆ ಸೇವೆ ಒದಗಿಸಬೇಕೆಂದು ಸಚಿವರು ಸೂಚಿಸಿದಾಗ, ಅಗ್ನಿಶಾಮಕ ಠಾಣಾಧಿಕಾರಿ ನಮ್ಮಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳನ್ನು ಹೊರತು ಪಡಿಸಿ, ಬೇರೆ ಉದ್ದೇಶಗಳಿಗೆ ಉಚಿತ ಸೇವೆಗೆ ಅವಕಾಶವಿಲ್ಲ ಎಂದು ಉತ್ತರಿಸಿದರು.

ಪೊಲೀಸ್‌ ಉಪ ನಿರೀಕ್ಷಕರು ಟ್ರಾಫಿಕ್‌ ಜಾಮ್‌ ಆಗದಂತೆ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಸ್ಥಳಾವಕಾಶದ ಕೊರತೆಯಿದೆ. ಇದಕ್ಕೆ ಸ್ಥಳೀಯರು ಅವಕಾಶ ಮಾಡಿಕೊಡಬೇಕು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅರಣ್ಯ ಇಲಾಖೆ ಅವರು ರಸ್ತೆಯ ಎರಡು ಬದಿಯಲ್ಲಿರುವ ಗಿಡಗಳನ್ನು ತೆಗೆಸಿ. ರಸ್ತೆಯ ಪಕ್ಕ ಯಾವುದೆ ಗಿಡಗಳಿದ್ದರೆ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತದೆ. ಲೋಕೋಪಯೋಗಿ ಇಲಾಖೆಯವರು ಕೊಂಡ್ಲಿ ಕ್ರಾಸ್‌ ಕಡೆಯಿಂದ ಬರುವ ರಸ್ತೆಯಲ್ಲಿರುವ ಗುಂಡಿಗಳನ್ನು ತಕ್ಷಣವೆ ಮುಚ್ಚಬೇಕು. ಇದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವುದನ್ನು ತಪ್ಪಿಸ ಬಹುದು. ಜಾತ್ರೆ ಸಂದರ್ಭದ ಮೂರು ದಿನಗಳ ಕಾಲ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಸಹಾಯಕರನ್ನು ನೇಮಿಸದೆ ತಾವೇ ಖುದ್ದು ಹಾಜರಿರಬೇಕು ಎಂದು ಆದೇಶಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್‌, ಜಿಪಂ ಸದಸ್ಯೆ ಮಂಜಳಮ್ಮ, ತಹಸೀಲ್ದಾರ್‌ ಬಿ.ತೇಜಸ್ವಿನಿ, ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ಮುಂತಾದವರಿದ್ದರು.