Asianet Suvarna News Asianet Suvarna News

ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಕಡ್ಡಾಯ: ಡಿಸಿ ವೆಂಕಟ್‌ ರಾಜಾ ಸೂಚನೆ

ದೇಶದಲ್ಲಿ ಒಬ್ಬರಿಗೆ ಒಂದು ಸ್ಥಳದಲ್ಲಿ ಒಂದು ಮತದಾನ ಹಕ್ಕನ್ನು ನೀಡುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಸೂಚನೆ ನೀಡಿರುವ ಆದೇಶದಂತೆ ಮತದಾರರ ಚೀಟಿಗಳನ್ನು ಆಧಾರ್‌ ಕಾರ್ಡ್‌ಗಳಿಗೆ ಲಿಂಕ್‌ ಮಾಡುವುದು ಕಡ್ಡಾಯ.

Linking of Aadhaar Card to Election ID Card is mandatory Says Kolar DC Venkat Raja gvd
Author
First Published Nov 30, 2022, 8:51 AM IST

ಬಂಗಾರಪೇಟೆ (ನ.30): ದೇಶದಲ್ಲಿ ಒಬ್ಬರಿಗೆ ಒಂದು ಸ್ಥಳದಲ್ಲಿ ಒಂದು ಮತದಾನ ಹಕ್ಕನ್ನು ನೀಡುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ಸೂಚನೆ ನೀಡಿರುವ ಆದೇಶದಂತೆ ಮತದಾರರ ಚೀಟಿಗಳನ್ನು ಆಧಾರ್‌ ಕಾರ್ಡ್‌ಗಳಿಗೆ ಲಿಂಕ್‌ ಮಾಡುವುದು ಕಡ್ಡಾಯವಾಗಿದ್ದು, ಈ ಕಾರ್ಯವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಶೇ 79% ಮುಗಿದಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟ್‌ ರಾಜಾ ಹೇಳಿದರು.

ಪ್ರತಿ ಮಂಗಳವಾರ ಒಂದೊಂದು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕಾರ‍್ಯಕ್ರಮದಂತೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಡೀ ಜಿಲ್ಲೆಯಲ್ಲಿ ಎಲ್ಲಾ ಕಡೆ ಯಶಸ್ವಿಯಾಗಿ ನಡೆಯುತ್ತಿದ್ದು, ಪಟ್ಟಣದ ವ್ಯಾಪ್ತಿಯಲ್ಲಿ ಕಡಿಮೆ ಶೇಕಡವಾರು ಲಿಂಕ್‌ ಮಾಡುತ್ತಿದ್ದು, ಈ ಕೂಡಲೇ ಪುರಸಭೆ ಅಧಿಕಾರಿ ಸಿಬ್ಬಂದಿಯೊಂದಿಗೆ ಎಲ್ಲಾ ಬಿಎಲ್‌ಒಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

Mandya: ಕಮಿಷನ್‌ ಮೇಲಾಟ: ನಗರಾಭಿವೃದ್ಧಿ ಕಾಮಗಾರಿ ವಿಳಂಬ

ಪ್ರಸ್ತುತ ಹಳ್ಳಿಯಿಂದ ಪಟ್ಟಣಕ್ಕೆ ಸಾಕಷ್ಠು ಜನರು ಬಂದು ವಾಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ಮತಗಳು ಎರಡೂ ಕಡೆ ಇದ್ದು, ಎರಡೂ ಕಡೆ ಮತದಾನ ಮಾಡುವ ಪ್ರಕರಣಗಳಿದೆ. ಇದೆಲ್ಲಾವು ಕಾನೂನು ವಿರೋಧವಾಗಿದ್ದು, ಒಬ್ಬ ವ್ಯಕ್ತಿಗೆ ಒಂದು ಚುನಾವಣೆಗೆ ಒಂದು ಮತದಾನ ಎಂಬ ಕಾನೂನನ್ನು ಜಾರಿಗೆ ತಂದಿರುವುದರಿಂದ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿ ಅಕ್ರಮ ಮತದಾನವನ್ನು ತಡೆಗಟ್ಟುವ ಉದ್ದೇಶದಿಂದ ಈ ಯೋಜನೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಕಾರಿಡಾರ್‌ ರಸ್ತೆ ನಿರ್ಮಾಣ ಮಾಡುತ್ತಿದ್ದು, ಈ ರಸ್ತೆಗೆ ಬರುವ ಕೆಲವು ಪಿ ನಂಬರ್‌ಗಳ ಜಮೀನುಗಳಿಗೆ ಸೂಕ್ತ ದಾಖಲೆಗಳಿಲ್ಲದೇ ಇರುವುದರಿಂದ ಇಂತಹವರಿಗೆ ಪರಿಹಾರ ಬಂದಿರುವುದಿಲ್ಲ. ಇಂತಹ ಪಿ ನಂಬರ್‌ ಜಮೀನುಗಳ ರೈತರಿಗೆ ಹಲವಾರು ಬಾರಿ ಜಮೀನು ಮಂಜೂರಾದ ಸಾಗುವಳಿ ಚೀಟಿ ಸೇರಿದಂತೆ ಭೂ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದರೂ ಇದುವರೆಗೂ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಈ ಹಿನ್ನಲೆಯಲ್ಲಿ ಅಂತಹ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಈಗಲಾದರೂ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದೆಂದರು. ತಹಸೀಲ್ದಾರ್‌ ಎಂ.ದಯಾನಂದ್‌, ಪುರಸಭೆ ಮುಖ್ಯಾಧಿಕಾರಿ ಜಿ.ಎನ್‌.ಚಲಪತಿ, ಅಪರ ಶಿರಸ್ತೇದಾರ್‌ ಚಂದ್ರಶೇಖರ್‌, ಕಂದಾಯ ನಿರೀಕ್ಷಕ ಅಜಯ್‌ ಮುಂತಾದವರಿದ್ದರು.

ಜಿಲ್ಲಾಧಿಕಾರಿ ದಿಢೀರ್‌ ಭೇಟಿ, ಪರಿಶೀಲನೆ: ಜಿಲ್ಲಾಧಿಕಾರಿ ವೆಂಕಟ್‌ ರಾಜಾ ತಾಲೂಕು ಕಚೇರಿಗೆ ಭೇಟಿ ನೀಡುವ ವೇಳೆ ಪಟ್ಟಣದ ಪುರಸಭೆ ಹಾಗೂ ಇಂದಿರಾ ಕ್ಯಾಂಟೀನ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಪುರಸಭೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ಮಾಡಿ ಇ-ಸ್ವತ್ತು ಖಾತೆಗಳನ್ನು ಮಾಡುವ ವೇಳೆ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು. 

ನಿಜವಾದ ಖಾತೆದಾರರಿಗೆ ಕಾನೂನು ಬದ್ದವಾಗಿ ತಡೆ ಮಾಡದೇ ಆಗ್ಗಿಂದಾಗ್ಗೆ ಕಡತಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚನೆ ನೀಡಿದರು. ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು, ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರವನ್ನು ಪರಿಶೀಲನೆ ನಡೆಸಿದರು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನಿರ್ವಹಣೆ ಮಾಡಬೇಕು. ಬಡವರಿಗೆ ಹೆಚ್ಚು ಅನುಕೂಲವಾಗವಂತೆ ಆಹಾರ ವಿತರಣೆ ಮಾಡಬೇಕು. ಪ್ರತಿ ದಿನ ಎಷ್ಟೆಷ್ಟುಜನರು ಊಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ: ಸಿದ್ದರಾಮಯ್ಯ

ಪ್ರತಿ ದಿನವೂ ರುಚಿಕರವಾದ ಅಡುಗೆ ಮಾಡುವಂತೆ ಹೇಳಿ ಮೊದಲಿಗೆ ಸ್ವಚ್ಚತೆಯನ್ನು ಕಾಪಾಡುವಂತೆ ಸಲಹೆ ನೀಡಿದರು. ಇಡೀ ಜಿಲ್ಲೆಯಲ್ಲಿಯೇ ಬಂಗಾರಪೇಟೆ ಪುರಸಭೆಯಲ್ಲಿ ಮಾದರಿಯಾಗಿ ಹಾಗೂ ವ್ಯವಸ್ಥಿತವಾಗಿ ಕಚೇರಿ ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಕೂಡಲೇ ವಿಲೇವಾರಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು. ತಹಶೀಲ್ದಾರ್‌ ಎಂ.ದಯಾನಂದ್‌, ಪುರಸಭೆ ಮುಖ್ಯಾಧಿಕಾರಿ ಜಿ.ಎನ್‌.ಚಲಪತಿ, ಮಾಜಿ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ಕಂದಾಯ ಅಧಿಕಾರಿ ಕಾಂತರಾಜ್‌, ಸೋಮಣ್ಣ, ಸಿಎಒ ವೆಂಕಟೇಶ್‌ ಮುಂತಾದವರು ಹಾಜರಿದ್ದರು.

Follow Us:
Download App:
  • android
  • ios