ಯಾರೇ ಬಂದು ಸುಳ್ಳು ಭರವಸೆಗಳನ್ನು ನೀಡಿದರೂ ಅದನ್ನು ನೀವು ನಂಬಬೇಡಿ. ನಾನು ಮತ್ತು ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯ ಉಳಿಯಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. 

ಕೆ.ಆರ್‌.ಪೇಟೆ (ನ.30): ಯಾರೇ ಬಂದು ಸುಳ್ಳು ಭರವಸೆಗಳನ್ನು ನೀಡಿದರೂ ಅದನ್ನು ನೀವು ನಂಬಬೇಡಿ. ನಾನು ಮತ್ತು ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯ ಉಳಿಯಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಪುರಸಭೆ ಪಕ್ಕದ ಮೈದಾನದಲ್ಲಿ ರಾಜ್ಯ ಕುರುಬರ ಸಂಘ, ಜಿಲ್ಲಾ ಮತ್ತು ತಾಲೂಕು ಕುರುಬರ ಸಂಘಗಳು ಸಂಯುಕ್ತವಾಗಿ ಆಯೋಜಿಸಿದ್ದ 535ನೇ ಕನಕ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಮತದಾರರು ಬಹಳ ಜಾಗೃತಿಯಿಂದ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದು ಬರಬೇಕು. 

ನಾವು ಯಾರಿಗೇ ಟಿಕೆಟ್‌ ನೀಡಿದರೂ ನೀವು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು. ಕಾಂಗ್ರೆಸ್‌ ಗೆದ್ದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿ ಗೆದ್ದರೆ ಬಸವರಾಜ ಬೊಮ್ಮಾಯಿಗೆ, ಜೆಡಿಎಸ್‌ ಗೆದ್ದರೆ ಎಚ್‌.ಡಿ. ಕುಮಾರಸ್ವಾಮಿಗೆ ಶಕ್ತಿ ಬರುತ್ತದೆ. ಇದನ್ನು ಅರ್ಥಮಾಡಿಕೊಂಡು ಇಲ್ಲಿನ ಜನರು ಮುಂದಿನ ಚುನಾವಣೆಯಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆ ಮತಹಾಕುವಂತೆ ಸಿದ್ದರಾಮಯ್ಯ ಮನವಿ ಮಾಡಿದರು. ನಾನು ಹೋದಲೆಲ್ಲಾ ನೀವು ಪ್ರೀತಿ, ಅಭಿಮಾನ ತೋರಿಸುತ್ತೀದ್ದೀರಿ. ನಿಮ್ಮ ಪ್ರೀತಿ ಮತ್ತು ಅಭಿಮಾನಗಳು ಮತವಾಗಿ ಪರಿವರ್ತನೆಯಾದರೆ ಮಾತ್ರ ನನಗೆ ಶಕ್ತಿ ಬರುತ್ತದೆ ಎಂದು ಪುನರುಚ್ಚರಿಸಿದರು.

ಸಿದ್ದರಾಮಯ್ಯ ‘ನಾ​ನು’ ಎಂಬ ಅಹಂಕಾರ ಬಿಡ​ಲಿ: ಈಶ್ವ​ರ​ಪ್ಪ

ನೀಚರು, ಬಡವರ ವಿರೋಧಿಗಳು: ಬಿಜಿಪಿಯವರು ನೀಚರು ಮತ್ತು ಬಡವರ ವಿರೋಧಿಗಳು. ಅವರ ಮನೆ ಹಾಳಾಗ, ಇದುವರೆಗೂ ನಾಡಿನಲ್ಲಿರುವ ಬಡವರಿಗಾಗಿ ಒಂದೇ ಒಂದು ಮನೆ ಕಟ್ಟಿಸಿಕೊಡಲು ಅವರಿಂದ ಸಾಧ್ಯವಾಗಿಲ್ಲ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ. ಬಡವರಿಗೆ ಒಂದು ಸೂರು ಕಲ್ಪಿಸಿಕೊಡದ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಬಡವರಿಗಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. 

ಬಡವರ ಹೊಟ್ಟೆತುಂಬಿಸಲು ಕಡಿಮೆ ದರದಲ್ಲಿ ಊಟ, ತಿಂಡಿ ನೀಡುವ ಇಂದಿರಾ ಕ್ಯಾಂಟೀನ್‌ ಆರಂಭಿಸಿದ್ದೆ. ಶೋಷಿತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು 1500 ರು. ಶಿಷ್ಯ ವೇತನ ನೀಡುತ್ತಿದ್ದೆ. ಬಡವರ ಹೊಟ್ಟೆತುಂಬಿಸಲು ಪ್ರತಿ ಕುಟುಂಬಕ್ಕೂ ತಲಾ 7 ಕೆ.ಜಿ.ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ರೂಪಿಸಿದ್ದೆ. ನಾನು ಅಧಿಕಾರ ಕಳೆದುಕೊಂಡ ನಂತರ ಬಡವರ ಪರವಾದ ಎಲ್ಲಾ ಯೋಜನೆಗಳನ್ನೂ ಬಿಜೆಪಿ ಸರ್ಕಾರ ನಿಲ್ಲಿಸಿದೆ. ನಾನು ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸಿದೆ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ತಲಾ 10 ಕೆ.ಜಿ.ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದರು.

ಅಧಿಕಾರದಿಂದ ದೊಡ್ಡವರಾಗುವುದಿಲ್ಲ: ಸಚಿವ ಕೆ.ಸಿ. ನಾರಾಯಣಗೌಡ ಇಂದಿನ ಸಭೆಗೆ ಬಂದಿಲ್ಲ. ನಾರಾಯಣಗೌಡ ಜೆಡಿಎಸ್‌ನಿಂದ ಬಿಜೆಪಿಗೆ ಹೋದ ಗಿರಾಕಿ ಎಂದು ಹೀಯಾಳಿಸಿದ ಸಿದ್ದರಾಮಯ್ಯ, ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಯಾರಿಗಾದರೂ ಮನೆ ಕಟ್ಟಿಸಿಕೊಟ್ಟಿದ್ದಾರೋ. ಇಲ್ಲಾ ತಾನೇ. ಮತ್ಯಾಕೆ ಅವರಿಗೆ ಮತ್ತೆ ವೋಟು ಕೊಡಬೇಕು. ಶ್ರೀಮಂತಿಕೆ, ಅಧಿಕಾರದಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಯಾರು ಮನುಷತ್ವದ ಗುಣಗಳನ್ನು ಹೊಂದಿರುತ್ತಾರೋ ಅವರೇ ದೊಡ್ಡವರು ಎಂದರು.

ಹೋರಾಟದಿಂದ ಮುಖ್ಯವಾಹಿನಿಗೆ ಬರಲು ಸಾಧ್ಯ: ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಶೋಷಿತ ಸಮುದಾಯಗಳು ಮುಂದೆ ಬರಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟವಿಲ್ಲದೆ ಯಾವುದೇ ಶೋಷಿತ ವರ್ಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ ದಾಸಶ್ರೇಷ್ಠ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕುಲ ಕುಲ ಎನ್ನುವವರ ಕುಲದ ನೆಲೆಯನ್ನೇ ಪ್ರಶ್ನಿಸಿದರು. 

ರಾಯಣ್ಣ ಇಂದಿನ ಬಿಜೆಪಿಗರಂತೆ ಡೋಂಗಿ ದೇಶಭಕ್ತನಲ್ಲ. ನಾಡಿನ ಸ್ವಾತ್ಯಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರಿಂದ ನೇಣುಗಂಬಕ್ಕೇರಿದವನು. ಕನಕದಾಸರು ಮತ್ತು ರಾಯಣ್ಣನಂತಹವರು ನಮ್ಮ ಯುವಕರಿಗೆ ಆದರ್ಶವಾಗಬೇಕು ಎನ್ನುವ ಕಾರಣಕ್ಕಾಗಿ ಕನಕ ಜಯಂತಿಯನ್ನು ಆಚರಿಸಿ ಕನಕರ ಹುಟ್ಟೂರು ಬಾಡಾ ಗ್ರಾಮದ ಅಭಿವೃದ್ಧಿಗೆ ನಾನು ನೆರವು ನೀಡಿದ್ದೇನೆ. ಸಂಗೋಳ್ಳಿ ರಾಯಣ್ಣನ ಹುಟ್ಟೂರು ಮತ್ತು ಆತನನ್ನು ಬ್ರಿಟಿಷರು ನೇಣು ಹಾಕಿದ ಜಾಗವನ್ನು 272 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಿಸಿದ್ದೇನೆ ಎಂದು ಹೇಳಿದರು.

ಜಾತಿಗಾಗಿ ಅರ್ಜಿ: ನಾವ್ಯಾರೂ ಅರ್ಜಿ ಹಾಕಿಕೊಂಡು ನಮಗೆ ಬೇಕಾದ ಜಾತಿಯಲ್ಲಿ ಹುಟ್ಟಿಲ್ಲ. ನಮ್ಮ ಹಿರಿಯರ ಜನ್ಯದಿಂದ ನಮಗೆ ಜಾತಿ ಬಂದಿದೆ. ಕನಕದಾಸರ, ಬಸವಣ್ಣನವರ, ಅಂಬೇಡ್ಕರ್‌ ಅವರ ಸಿದ್ಧಾಂತಗಳನ್ನು ಅನುಸರಿಸಿ ನಾವೆಲ್ಲ ಮನುಷ್ಯರಾಗಿ ಬಾಳೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು. ಮೈಸೂರು ಕನಕಪೀಠದ ಶಿವಾನಂಪುರಿ ಸ್ವಾಮೀಜಿ, ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ, ಎಚ್‌.ಸಿ. ಮಹದೇವಪ್ಪ. ಎನ್‌.ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಹೆಬ್ಬಾಳದ ಶಾಸಕ ಭೈರತಿ ಸುರೇಶ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳೀಗೌಡ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್‌, ಬಿ.ಪ್ರಕಾಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ತಾಲೂಕು ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎಲ್‌.ದೇವರಾಜು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡವರಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್‌, ಬಿ.ನಾಗೇಂದ್ರಕುಮಾರ್‌, ಮುಖಂಡರಾದ ಬಿ.ಎಸ್‌.ಶಿವಣ್ಣ, ಮನ್ಸೂರ್‌ ಆಲೀಖಾನ್‌, ಉದ್ಯಮಿ ಕೆ.ನರಹರಿ, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಆಲಂಬಾಡಿ ಕಾವಲು ಮಲ್ಲಿಕಾರ್ಜುನ್‌, ಬೂಕನಕೆರೆ ವಿಜಯ ರಾಮೇಗೌಡ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಜಿಲ್ಲಾ ಕುರುಬರ ಸಮಘದ ಅಧ್ಯಕ್ಷ ಎಂ.ಎಲ್‌.ಸುರೇಶ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ್‌ ಸೇರಿದಂತೆ ನೂರಕ್ಕೂ ಹೆಚ್ಚು ಗಣ್ಯರು ಇದ್ದರು. ಜಿಲ್ಲೆಯ ಕುರುಬ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಕುರಬರ ಸಂಘದ ವತಿಯಿಂದ ಅಭಿನಂದಿಸಲಾಯಿತು.