ಬೆಂಗಳೂರು(ಫೆ.11): ಬೆಂಗಳೂರು-ಮಂಗಳೂರು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಹಗಲಿನ ಸಮಯದಲ್ಲಿ ಪ್ರಕೃತಿಯ ವಿಹಂಗಮ ನೋಟ ಕಣ್ತುಂಬಿಕೊಳ್ಳಲು ಈ ರೈಲಿಗೆ ಸದ್ಯದಲ್ಲೇ ‘ವಿಸ್ಟಾಡೋಮ್‌’ ಬೋಗಿ ಅಳವಡಿಸುವ ಸಾಧ್ಯತೆ ಇದೆ.

ಸದ್ಯ ಕೊರೋನಾ ಕಾರಣದಿಂದಾಗಿ ರೈಲ್ವೆ ಸೇವೆ ಸ್ಥಗಿತಗೊಂಡಿದ್ದು, ಏಪ್ರಿಲ್‌ ವೇಳೆಗೆ ಪುನರ್‌ ಆರಂಭಗೊಳ್ಳುವ ನಿರೀಕ್ಷೆ ಇದೆ. ರೈಲ್ವೆ ಇಲಾಖೆಯಿಂದ ನೈಋುತ್ಯ ರೈಲ್ವೆಗೆ ಒಂದು ‘ವಿಸ್ಟಾಡೋಮ್‌’ ಎ.ಸಿ. ಕೋಚ್‌ (ಗಾಜಿನ ಛಾವಣಿಯುಳ್ಳ ಬೋಗಿ) ಹಂಚಿಕೆ ಮಾಡಲಾಗಿದೆ. ಬಹುತೇಕ ಈ ಬೋಗಿಯನ್ನು ಬೆಂಗಳೂರು-ಮಂಗಳೂರು ರೈಲಿಗೆ ಅಳವಡಿಸುವ ಸಾಧ್ಯತೆ ಇದೆ.

ಈ ಬಗ್ಗೆ ನೈಋುತ್ಯ ರೈಲ್ವೆ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಬೆಂಗಳೂರು-ಮಂಗಳೂರು ನಡುವಿನ ಮಾರ್ಗದ ರೈಲಿಗೆ ಅಳವಡಿಸುವ ಸಾಧ್ಯತೆ ಇದೆ. ಆದರೂ ಇದು ಇನ್ನೂ ಖಚಿತಪಟ್ಟಿಲ್ಲ. ಬೋಗಿಯು ಇನ್ನೂ ನೈಋುತ್ಯ ರೈಲ್ವೆಗೆ ಹಸ್ತಾಂತರವಾಗಿಲ್ಲ ಎಂದು ಹೇಳಿದರು.

ಶಿವಮೊಗ್ಗ-ಬೆಂಗಳೂರು ರೈಲು ಸಂಚಾರ ಸಮಯ ಬದಲು : ಗಮನಿಸಿ

ಈ ಬೋಗಿಯನ್ನು ಅಳವಡಿಸಿದರೆ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಹ್ಮಣ್ಯ ರಸ್ತೆ- ಸಕಲೇಶಪುರ ಘಟ್ಟಪ್ರದೇಶ ನಡುವಿನ 55 ಕಿ.ಮೀ. ಉದ್ದದಲ್ಲಿ ಹಸಿರುಮಯ ಅರಣ್ಯ, ಜಲಪಾತಗಳು, ಸೇತುವೆಗಳ ವಿಹಂಗಮ ನೋಟವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ಈ ಬೋಗಿಯಲ್ಲಿ ಕುಳಿತು ಪ್ರಯಾಣಿಸುವವರಿಗೆ ಪ್ರಯಾಣ ದರದಲ್ಲಿ ಹೆಚ್ಚು ವ್ಯತ್ಯಾಸ ಇರಲಿದೆ ಎಂಬುದೂ ಸೇರಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ಸೌಲಭ್ಯ?:

ವಿಸ್ಟಾಡೋಮ್‌ ಕೋಚ್‌ ಅನ್ನು ಹಾಲಿ ಇರುವ ರೈಲಿಗೆ ಜೋಡಿಸಲಾಗುತ್ತದೆ. ಇದರಲ್ಲಿ 40 ಒರಗಿಕೊಳ್ಳುವ ಹಾಗೂ 360 ಡಿಗ್ರಿ ಸುತ್ತುವ ಕುರ್ಚಿಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋವೇವ್‌ ಓವನ್‌, ಪುಟ್ಟ ರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿರುತ್ತವೆ.