ಕಾರವಾರ/ಕಾರ್ಕಳ [ಮಾ.01]: ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶನಿವಾರ ವರ್ಷದ ಮೊದಲ ಮಳೆ ಸುರಿದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಅರ್ಧಗಂಟೆಗೂ ಹೆಚ್ಚಿನ ಕಾಲ ಉತ್ತಮ ಮಳೆಯಾಗಿದ್ದರೆ, ಕಾರವಾರ ತಾಲೂಕಿನ ದೇವಳಮಕ್ಕಿ ಭಾಗದಲ್ಲಿ ಕೆಲಕಾಲ ಮಳೆ ಸುರಿದಿದೆ. ಭಟ್ಕಳದಲ್ಲೂ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಬಿಸಿಲ ಝಳ ಆರಂಭವಾಗಿದ್ದು, ಕೆಲವು ಹೊತ್ತು ಸುರಿದ ಮಳೆಯಿಂದ ವಾತಾವರಣ ಸ್ವಲ್ಪ ತಂಪಾಗಿದೆ.

ಶಿರಸಿಯಲ್ಲಿ ಮಾ.3ರಿಂದ ಮಾರಿಕಾಂಬಾ ಜಾತ್ರಾ ಆರಂಭವಾಗುವುದರಿಂದ ಅಂಗಡಿಕಾರರು ಆತಂಕಪಡುವಂತಾಗಿದೆ. ಸಂಜೆ ವೇಳೆ ಮಳೆಯಾದರೆ ಜಾತ್ರೆಗೆ ಬರುವವರ ಸಂಖ್ಯೆ ಕಡಿಮೆ ಆಗಲಿದ್ದು, ವ್ಯಾಪಾರ ವಹಿವಾಟು ಕುಂಠಿತವಾಗುತ್ತದೆ ಎನ್ನುವುದು ಅಂಗಡಿಕಾರರ ಆತಂಕ.

ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರೀ ಮಳೆ...

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶನಿವಾರ ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಸುಮಾರು 5 ನಿವಿಷಗಳ ಕಾಲ ಮಳೆ ಸುರಿದಿದೆ. ಹವಾಮಾನ ವೈಪರೀತ್ಯದಿಂದ ಕಳೆದ ಎರಡು ದಿನಗಳಿಂದ ವಿಪರೀತ ಸೆಕೆ ಉಂಟಾಗಿತ್ತು. ಇದೀಗ ಮಳೆರಾಯನ ಆಗಮನದಿಂದ ಸ್ವಲ್ಪ ಮಟ್ಟಿಗೆ ಜನತೆಗೆ ಸಂತಸ ತಂದಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಕೆಲ​ವೆಡೆ ಶನಿ​ವಾರ ಹಗಲು ಮೋಡ ಹಾಗೂ ಸೆಕೆಯ ವಾತಾ​ವ​ರಣ ಕಂಡು ಬಂತು.