ಮುಸ್ಲಿಂ ಕಾಲೇಜು ವಿರೋಧಿಸಿದ ಮುತಾಲಿಕ್‌ಗೆ ಜೀವ ಬೆದರಿಕೆ
ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ 10 ಪ್ರತ್ಯೇಕ ಕಾಲೇಜುಗಳನ್ನು ತೆರೆಯಲಾಗುವುದು ಎಂಬ ಸರ್ಕಾರದ ತೀರ್ಮಾನವನ್ನು ಖಂಡಿಸಿ, ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರಮೋದ್ ಮುತಾಲಿಕ್
ಧಾರವಾಡ(ಡಿ.02): ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ 10 ಕಾಲೇಜುಗಳನ್ನು ಪ್ರಾರಂಭಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಬಂದಿದ್ದು, ಈ ಕುರಿತು ಧಾರವಾಡ ಉಪ ನಗರ ಪೊಲೀಸ್ ಠಾಣೆಯಲ್ಲಿ ಮುತಾಲಿಕ್ ದೂರು ದಾಖಲಿಸಿದ್ದಾರೆ.
ಬುಧವಾರ ಅಪರಿಚಿತರೊಬ್ಬರು ಮೊಬೈಲ್ (8277476700) ನಂಬರ್‌ನಿಂದ ಮುತಾಲಿಕ್ ಅವರ ಮೊಬೈಲ್‌ಗೆ ಧ್ವನಿ ಸಂದೇಶ ಮತ್ತು ಅಶ್ಲೀಲ ಚಿತ್ರವನ್ನು ಕಳಿಸಿದ್ದಾನೆ. ಈ ಕುರಿತು ಉಪನಗರ ಪೊಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ. ಇದರಲ್ಲಿ ಬೈಗಳ ಮತ್ತು ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಿಂದೂ ಹೆಣ್ಮಕ್ಕಳು ಮುಸ್ಲಿಂ ಯುವಕರ ಬೆನ್ನು ಬೀಳಬೇಡಿ: ಪ್ರಮೋದ ಮುತಾಲಿಕ್
ಪ್ರಕರಣ ದಾಖಲಿಸಿಕೊಂಡ ಪೊಲೀಸರ ಮೊಬೈಲ್ ಸಂಖ್ಯೆ ಮೂಲಕ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ 10 ಪ್ರತ್ಯೇಕ ಕಾಲೇಜುಗಳನ್ನು ತೆರೆಯಲಾಗುವುದು ಎಂಬ ಸರ್ಕಾರದ ತೀರ್ಮಾನವನ್ನು ಮುತಾಲಿಕ ಖಂಡಿಸಿ, ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಗೊತ್ತಾಗಿದೆ.
ಈ ಕುರಿತು ಪ್ರಮೋದ ಮುತಾಲಿಕ್ ಗುರುವಾರ ಲಿಖಿತವಾಗಿ ಉಪನಗರ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಧರ್ಮಕ್ಕಾಗಿ ಮತ್ತಷ್ಟು ಗಟ್ಟಿಯಾಗಿ ಹೋರಾಟ ಮಾಡುತ್ತೇನೆ ಎಂದು ಮುತಾಲಿಕ್ ಹೇಳಿದ್ದಾರೆ.
ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ವಿಚಾರ; ತನ್ವೀರ್ ಸೇಠ್ ವಿರುದ್ಧ ಕೆಂಡ ಕಾರಿದ ಮುತಾಲಿಕ್
ನಮ್ಮ ಬಲಿದಾನವರೂ ಮುಸ್ಲಿಂ ಕಾಲೇಜು ಸ್ಥಾಪಿಸಲು ಬಿಡಲ್ಲ
ರಾಜ್ಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ. ನಮ್ಮ ಬಲಿದಾನವಾದರೂ ಚಿಂತೆಯಿಲ್ಲ, ಸರ್ಕಾರದ ಈ ನಡೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದರು.
ಕಾಂಗ್ರೆಸ್ ಮುಸಲ್ಮಾನರ ತುಷ್ಟೀಕರಣದ ರಾಜಕಾರಣ ಮಾಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೀಗ ಬಿಜೆಪಿ ಕೂಡ ಮುಸಲ್ಮಾನರ ತುಷ್ಟೀಕರಣಕ್ಕಾಗಿ ಪ್ರತ್ಯೇಕ 10 ಕಾಲೇಜು ಪ್ರಾರಂಭಿಸಲು ನಿರ್ಧಾರ ಕೈಗೊಂಡಿದ್ದು, ಪ್ರತಿ ಕಾಲೇಜಿಗೆ 2.5 ಕೋಟಿ ಅನುದಾನ ನೀಡಲು ಸಿದ್ಧತೆ ಮಾಡಿಕೊಂಡಿದೆ. ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು.